
ಬೆಳಗಾವಿ
ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಬೆಳಗಾವಿಯ ಯುವಕನೊಬ್ಬ ಖಾನಾಪುರ ತಾಲೂಕಿನ ನಂದಗಡ ದಂತಿ ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದಾನೆ.
ನಗರದ ಮಾರುತಿಗಲ್ಲಿಯ ಸಾಂಬ್ರಾ ರಸ್ತೆ ನಿವಾಸಿ ಸರ್ವೇಶ ಕಂಗ್ರಾಳಕರ (27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಸೆ.20ರಂದು ಸಂಜೆ ಮನೆಯಿಂದ ಸಾರ್ವಜನಿಕ ಗಣಪತಿ ವೀಕ್ಷಿಸಲು ಹೋಗುವುದಾಗಿ ಹೇಳಿ ಹೊರಟಿದ್ದ ಸರ್ವೇಶ ಬಳಿಕ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ನಾಪತ್ತೆಯಾಗಿರುವ ಕುರಿತು ಪಾಲಕರು ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಇದೇ ಸಂದರ್ಭದಲ್ಲಿ ನಗರದ ಮಂಡೋಳಿ ರಸ್ತೆಯಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಯುವಕನ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಿದ್ದರು.
ಪೊಲೀಸರು ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ನಂದಗಡ ದಂತಿ ಗ್ರಾಮದ ಬಳಿ ಸರ್ವೇಶನ ಶವ ಪತ್ತೆಯಾಗಿದೆ.
ಯುವಕನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಮಂಡೋಳಿ ರಸ್ತೆಯಲ್ಲಿ ನಡೆದಿದ್ದಾಗಿ ಹೇಳಲಾಗುತ್ತಿರುವ ಘಟನೆಗೂ ಸರ್ವೇಶನ ಸಾವಿಗೂ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದ್ಯ ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ದೃಢಪಟ್ಟಿಲ್ಲ.
ಶವ ಪತ್ತೆಯಾದ ಸ್ಥಳ ಹಾಗೂ ಯುವಕನ ನಾಪತ್ತೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆಯಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕಾಣೆ ಹಾಗೂ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಸಾವಿನ ಹಿಂದೆ ನಾನಾ ಅನುಮಾನ ಇದ್ದು, ಸಾವಿಗೆ ಹೊಸ ತಿರುವು ಸಿಗುವ ಸಾಧ್ಯತೆ ದಟ್ಟವಾಗಿದೆ.
