
ಬೆಳಗಾವಿ
ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದಕ್ಕೆ ಆಕ್ರೋಶಗೊಂಡ 15ಕ್ಕೂ ಹೆಚ್ಚು ಮಂದಿ ಮನೆ ಬಾಗಿಲು ಮುರಿದು ಒಳನುಗ್ಗಿ ರುದ್ರಪ್ಪ ಸೇರಿದಂತೆ ಅವರ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅಂತ್ಯಕ್ರಿಯೆ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರುದ್ರಪ್ಪ, ನಿಮ್ಮ ತಂದೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ. ಅವರಿಗೆ ಬುದ್ಧಿ ಹೇಳುವಂತೆ ಕೆಲವರಿಗೆ ತಿಳಿಸಿದ್ದರು. ಈ ವಿಚಾರವಾಗಿ ರಾತ್ರಿ ವೇಳೆ ಮನೆಗೆ ಬಂದ ಕೆಲವರು, ‘ಬೈಯುತ್ತಿದ್ದೀಯಾ, ಯಾಕೆ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
15ಕ್ಕೂ ಹೆಚ್ಚು ಮಂದಿ ಏಕಾಏಕಿ ಮನೆಗೆ ನುಗ್ಗಿ ಬಾಗಿಲು ಮುರಿದು, ಕಬ್ಬಿಣದ ರಾಡ್, ಕಟ್ಟಿಗೆ ಸೇರಿದಂತೆ ವಿವಿಧ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ರುದ್ರಪ್ಪ ಅವರ ಕೈ, ಕಾಲು, ತಲೆ ಹಾಗೂ ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಅಲ್ಲದೆ, ಅವರ ಕುಟುಂಬದ ಸಣ್ಣ ಮಕ್ಕಳು ಹಾಗೂ ತಂದೆ-ತಾಯಿಯ ಮೇಲೂ ಹಲ್ಲೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಬಾಗಿಲು ಮುರಿದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದು, ಆರೋಪಿಗಳು ಮನೆಯ ಮುಂದೆ ಓಡಾಡುತ್ತಿರುವುದರಿಂದ ಭಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸುವಂತೆ ರುದ್ರಪ್ಪ ಮನವಿ ಮಾಡಿದ್ದಾರೆ.
