
ಬೆಳಗಾವಿ
ಬೆಳಗಾವಿ ನಗರದ ರಸ್ತೆ ನಿರ್ವಹಣೆ ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ. ಪಾಲಿಕೆಯಲ್ಲಿ ಯಾರ ಆಡಳಿತವಿದೆ ಎಂಬುದನ್ನು ಮೊದಲು ಗಮನಿಸಬೇಕು ಎಂದು ಶಾಸಕ ಅಭಯ ಪಾಟೀಲ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.
ಶನಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬೆಳಗಾವಿ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕ ಅಭಯ ಪಾಟೀಲ್ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ಶೇ.70ರಷ್ಟು ಅನುದಾನ ತೆಗೆದುಕೊಂಡು ಉತ್ತರ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಪ್ರತಿಯೊಂದು ವಿಚಾರಕ್ಕೂ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುವ ಬಿಜೆಪಿ ನಾಯಕರು, ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಮಾತನಾಡಬೇಕು. ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 10 ಸಾವಿರ ಕೋಟಿ ರೂ. ನೀಡಬೇಕಿದೆ ಎಂದು ತಿರುಗೇಟು ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಸೋರಿಕೆಗೆ ಕಡಿವಾಣ ಹಾಕಬೇಕು. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಆದಾಯ ಹೆಚ್ಚಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,600 ದರ ನಿಗದಿಪಡಿಸಲಾಗಿತ್ತು. ಇದೀಗ ಸಕ್ಕರೆ ಮಾರಾಟದ ಬೆಲೆಯ ಆಧಾರದ ಮೇಲೆ ರೈತರಿಗೆ ಹೆಚ್ಚುವರಿ ಹಣ ಪಾವತಿಸುವ ಲಾಭಾಂಶ ಹಂಚಿಕೆ ಸೂತ್ರವನ್ನು ಕಾರ್ಖಾನೆಗಳು ಅನುಸರಿಸುತ್ತಿವೆ. ಆರಂಭದಲ್ಲಿ 45 ರೂ. ಸಕ್ಕರೆ ಬೆಲೆಯ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,600 ರೂ
ನಿಗದಿಪಡಿಸಲಾಗಿತ್ತು. ಇದೀಗ 50 ರೂ. ಸಕ್ಕರೆ ಬೆಲೆಯ ಆಧಾರದ ಮೇಲೆ ದರ ಘೋಷಿಸಲಾಗುತ್ತಿದೆ. ಸಕ್ಕರೆ 50 ರೂ.ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದರೆ ರೈತರಿಗೆ ಪ್ರತಿ ಟನ್ ಕಬ್ಬಿಗೆ 4,000 ರೂ. ವರೆಗೆ ದರ ಸಿಗಲಿದೆ. ಕಬ್ಬಿನ ರಿಕವರಿ ಪ್ರಮಾಣದ ಆಧಾರದ ಮೇಲೆ ದರ ನಿಗದಿಯಾಗುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಏಕರೂಪದ ದರ ನೀಡಲು ಸಾಧ್ಯವಿಲ್ಲ. ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಬ್ಬಿನ ಖರೀದಿ ದರದಲ್ಲಿ ವ್ಯತ್ಯಾಸವಿದೆ. ಕಾರ್ಖಾನೆಗಳ ನಡುವೆ ಕಬ್ಬು ಖರೀದಿಗೆ ಪೈಪೋಟಿ ನಡೆಯುತ್ತಿದೆ ಎಂದರು.
ಬೆಳಗಾವಿ ಜಿಲ್ಲೆ ವಿಭಜನೆಯ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ವಿಭಜನೆ ಆಗಬೇಕು ಎಂಬುದು ನನ್ನ ಅಭಿಪ್ರಾಯ. ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಪ್ರಸ್ತಾಪವಿದೆ. ಆದರೆ ಬೈಲಹೊಂಗಲ, ಅಥಣಿ, ರಾಮದುರ್ಗ ಸೇರಿದಂತೆ ಹಲವು ತಾಲೂಕುಗಳಿಂದಲೂ ಪ್ರತ್ಯೇಕ ಜಿಲ್ಲೆ ರಚನೆಗೆ ಬೇಡಿಕೆ ಬರುತ್ತಿದೆ. ಹೀಗಾಗಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ ಎಂದರು.
