
ಎಂ.ಕೆ. ಹುಬ್ಬಳ್ಳಿ: ಇಲ್ಲಿನ ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಮೂರು ದಿನಗಳ ಕಾರ್ತಿಕ ಉತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.23ರಿಂದ 25ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ, ಪಲ್ಲಕ್ಕಿ ಉತ್ಸವ, ಉಪನ್ಯಾಸ, ದೀಪೋತ್ಸವ ಹಾಗೂ ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.
ನ.23 ಸೋಮವಾರ ಬೆಳಗ್ಗೆ ಧಾತ್ರಿ ಹೋಮವು ನಿಶಾನಿ ಹಾಗೂ ಬೆಳಗಾಂವಕರ ಬಂಧುಗಳ ವತಿಯಿಂದ ನೆರವೇರಲಿದೆ. ಬಳಿಕ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ನ.24 ಮಂಗಳವಾರ ಬೆಳಗ್ಗೆ 6.30ಕ್ಕೆ ಸುಪ್ರಭಾತ, ದೇವರನಾಮ, ವ್ಯಾಸಪೂಜೆ, ಬೆಳಗ್ಗೆ 10.30ಕ್ಕೆ ಪಲ್ಲಕ್ಕಿ ಸೇವೆ ಹಾಗೂ ಮನ್ಯುಸೂಕ್ತ ಹೋಮ ಜರುಗಲಿವೆ. ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ ಹಾಗೂ ಸಂಜೆ 7 ಗಂಟೆಗೆ ದೀಪೋತ್ಸವ ಮತ್ತು ಭಜನೆ ಕಾರ್ಯಕ್ರಮ ನಡೆಯಲಿದೆ.
ನ.25 ಬುಧವಾರ ಬೆಳಗ್ಗೆ 6.30ಕ್ಕೆ ಸುಪ್ರಭಾತ ಹಾಗೂ ದೇವರನಾಮ, ಬೆಳಗ್ಗೆ 9 ಗಂಟೆಗೆ ಕಾರ್ತಿಕ ಮಾಸದ ಮಹಿಮೆ ಕುರಿತು ಉಪನ್ಯಾಸ, 10 ಗಂಟೆಗೆ ಪಲ್ಲಕ್ಕಿ ಸೇವೆ, ಸಂಪ್ರೋಕ್ಷಣೆ ಹಾಗೂ ತೀರ್ಥ ಪ್ರಸಾದ ಕಾರ್ಯಕ್ರಮಗಳೊಂದಿಗೆ ಉತ್ಸವ ಸಮಾಪನಗೊಳ್ಳಲಿದೆ.
ಮೂರು ದಿನಗಳ ಉತ್ಸವದ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಪಂಡಿತ ನರಸಿಂಹಾಚಾರ ಪೂಜಾರ ಅವರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಸೇವೆಯನ್ನು ದಾಸ್ತಿಕೊಪ್ಪದ ಶ್ರೀ ಸಂದೀಪ್ ಕುಲಕರ್ಣಿ ವಹಿಸಿಕೊಂಡಿದ್ದು, ಧಾರ್ಮಿಕ ಕಾರ್ಯಕ್ರಮಗಳು ಪಂಡಿತ ಸುಧೀಂದ್ರಾಚಾರ್ ಗಿರಿಭಟ್ಟ ಅವರ ಮುಂದಾಳತ್ವದಲ್ಲಿ ನೆರವೇರಲಿವೆ.
ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೆಂಕಣ್ಣಾಚಾರ ಕೌಜಲಗಿ, ಉಪಾಧ್ಯಕ್ಷ ಭೀಮಸೇನಾಚಾರ ಅಷ್ಟಪುತ್ರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಎಲ್ಲ ಭಕ್ತಾದಿಗಳು ಮೂರು ದಿನಗಳ ಕಾರ್ತಿಕ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ವ್ಯವಸ್ಥಾಪಕ ರಘುನಾಥ ಕೌಜಲಗಿ (ಮೊ. 9620971818) ಅವರನ್ನು ಸಂಪರ್ಕಿಸಬಹುದು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಪಾಂಡುರಂಗ ಅ. ಕುಲಕರ್ಣಿ ತಿಳಿಸಿದ್ದಾರೆ.
