
ಬೆಳಗಾವಿ
ಕರ್ನಾಟಕದ ಬೆಂಗಳೂರಿನಲ್ಲಿ ವಲಸೆ ಬಂದವರ ಹಾವಳಿ ಹೆಚ್ಚಾಗಿದೆ. ಐಟಿ, ಬಿಟಿ ಕಂಪನಿಯಲ್ಲಿ ಕನ್ನಡಿಗರ ಸಂಖ್ಯೆ ಶೂನ್ಯ. ಮೊದಲ ನಮ್ಮ ಕನ್ನಡದ ಯುವಕರಿಗೆ ಉದ್ಯೋಗ ಕೊಡಬೇಕೆಂದು ಸಮರ ಆರಂಭಿಸಿದ್ದೇನೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ಭಾನುವಾರ ಬೆಳಗಾವಿ ಜೀರಿಗೆ ಸಭಾಂಗಣದಲ್ಲಿ ಕರವೇ ಜಿಲ್ಲಾ ಘಟಕ ಆಯೋಜಿಸಿದ್ದ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ವಲಸೆಗರಿಗೆ ಕಡಿವಾಣ ಹಾಕದಿದ್ದರೇ ಬೆಂಗಳೂರನ್ನು ಕಳೆದುಕೊಳ್ಳುವ ಆತಂಕ ಇದೆ. ಫ್ರಾನ್ಸ್ ದೇಶ ಕಟ್ಟಲು 300 ವರ್ಷ ತೆಗೆದುಕೊಂಡಿದ್ದರು. ಆದರೆ ವಲಸೆ ಬಂದವರು ಮೂರು ತಿಂಗಳಲ್ಲಿ ಸುಟ್ಟು ಹಾಕಿದ್ದರು. ಅಮೇರಿಕಾದ ಅಧ್ಯಕ್ಷರು ನಿಮ್ಮ ಪ್ರದೇಶ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಆದರೆ ಈಗ ಬೆಂಗಳೂರಿನಲ್ಲಿ ವಲಸಿಗರ ಹಾವಳಿ ಹೆಚ್ಚಾಗಿರುವುದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದರು.
ವಲಸೆ ಬಂದವರು ಮೊದಲು ಬೆಳಗಾವಿಯಲ್ಲಿ ಬಂದು ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರದ ಪರವಾಗಿ ಠರಾವ್ ಪಾಸ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದು ಕರವೇ ಸಂಘಟನೆ ಎಂದರು.
ವಿಶ್ವ ಕನ್ನಡ ಸಮ್ಮೇಳನಕ್ಕೂ ಮುನ್ನ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡುವ ಕಾಯ್ದೆ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಒತ್ತಾಯಿಸಿದ್ದೇನೆ. ನಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಾಗ ಕನ್ನಡ ಸಾಹಿತ್ಯ ಸಮ್ಮೇಳನ ಸಾರ್ಥಕವಾಗುತ್ತದೆ ಎಂದರು.
ಕರವೇ ದೊಡ್ಡ ಸಂಘಟನೆಯಾಗಿ ಯಾವ ರಾಜಕೀಯ ಶಕ್ತಿಗಳು ಕೆಲಸ ಮಾಡುವುದಿಲ್ಲವೋ ಅದನ್ನು ಕರವೇ ಮಾಡಿ ತೋರಿಸುತ್ತದೆ. ಒಂದು ಕಾಲದಲ್ಲಿ ಬೆಳಗಾವಿಯಲ್ಲಿ ಕನ್ನಡದ ಬಾವುಟ ಹಾರಿಸುವುದು ಕಷ್ಟವಾಗಿತ್ತು. ಆದರೆ ಈಗ ಗಲ್ಲಿ ಗಲ್ಲಿಯಲ್ಲಿ ಕನ್ನಡದ ಬಾವುಟ ಹಾರಾಡುತ್ತಿದೆ ಎಂದರೆ ಕನ್ನಡಿಗರ ಸಾಹಸಕ್ಕೆ ಪ್ರೇರಣೆಯಾಗಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರು ಬೆಳಗಾವಿಯ ನೆಲದಲ್ಲಿ ಕ್ರಾಂತಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಹಾಸಂತರು, ಸಾಧಕರು ಜನ್ಮ ತಾಳಿದ್ದಾರೆ. ಇಲ್ಲಿ ಬರಲು ನಾನು ಸಂಭ್ರಮಿಸುತ್ತೇನೆ. ಕನ್ನಡದ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬರುತ್ತಿರಲಿಲ್ಲ. ಕನ್ನಡಕ್ಕೆ ಸಾಥ್ ಕೊಟ್ಟವರು ಮಠಾಧೀಶರು, ಸಾಧು ಸಂತರು. ಬೇಕಾದರೆ ಮಠ ಬಿಟ್ಟು ಬಿಡುತ್ತೇವೆ. ಆದರೆ ಕನ್ಮಡತನ ಬಿಡುವುದಿಲ್ಲ ಎಂದವರು ಮಠಾಧೀಶರು. ಎಂಇಎಸ್ ಮತ ಬ್ಯಾಂಕ್ ನಿಂದ ಭಯ ಪಡುತ್ತಿದ್ದರು. ಬೆಳಗಾವಿಯಲ್ಲಿ ಕನ್ನಡ ಕಟ್ಟಿ ಬೆಳೆಸಲು ಕರವೇಗೆ ಜೊತೆಯಾಗಿ ನಿಂತವರು ಮಠಾಧೀಶರು ಎಂದು ಸ್ಮರಿಸಿದರು.
ನಾನು ಕರವೇ ಹೋರಾಟ ಆರಂಭಿಸಿದ್ದು ನಾಲ್ಕು ದಶಕಗಳು ಕಳೆದಿವೆ. ಆದರೆ ಅತೀ ಹೆಚ್ಚು ಕಾಲ ಕಳೆದಿದ್ದು ಬೆಳಗಾವಿಯಲ್ಲಿ.
ಹಿರಿಯ ತ್ಯಾಗ ಬಲಿದಾನದಿಂದ ಸಮಗ್ರ ಕರ್ನಾಟಕವಾಗಿದೆ. ಅಖಂಡವಾದ ಕರ್ನಾಟಕಕ್ಕೆ ಉದ್ಯಮ ಹಾಕಬೇಕು. ಅಂಥಲ್ಲಿ ಕನ್ನಡ ಯುವಕರಿಗೆ ಉದ್ಯೋಗ ಕೊಡಬೇಕು ಎಂದರು.
ಬೆಳಗಾವಿಗೆ ಕುತ್ತು ಬಂದಾಗ ಇಡೀ ಕರುನಾಡು ಒಂದಾಗುತ್ತದೆ.
ಬೆಳಗಾವಿ ಯಾರದೈತ್ತಿ ಎಂದರೆ ಬೆಳಗಾವಿ ನಮ್ಮದೈತಿ ಎನ್ನುವುದನ್ನು ಇಡೀ ರಾಜ್ಯ ಕೂಗಿ ಹೇಳುತ್ತದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಭಾಕರ ಕೋರೆ ಮಾತನಾಡಿ,ಬೆಳಗಾವಿಯಲ್ಲಿ ಕನ್ನಡ ಉಳಿವಿಗಾಗಿ ನಡೆದ ಹೋರಾಟದಲ್ಲಿ ಅನೇಕ ಸಂಘ-ಸಂಸ್ಥೆಗಳು ಹಾಗೂ ಕನ್ನಡಪರ ಹೋರಾಟಗಾರರ ಕೊಡುಗೆ ಅಪಾರವಾಗಿದೆ. 1965ರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೊದಲ ಮೆರವಣಿಗೆ ನಡೆಸಿದ ಕೀರ್ತಿ ಶಿವಮೊಗ್ಗ ಮೂಲದ ಪೈ ಎಂಬ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗೆ ಹಾಗೂ ಅವರೊಂದಿಗೆ ಕೈಜೋಡಿಸಿದ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ ಎಂದರು.
ಬೆಳಗಾವಿಯಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕದ ಅಸ್ಮಿತೆಯನ್ನು ಉಳಿಸಲು ಅನೇಕ ಮಹನೀಯರು ತ್ಯಾಗ ಮತ್ತು ಹೋರಾಟ ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರೂ ಕನ್ನಡಿಗರ ಬೆನ್ನಿಗೆ ನಿಂತು ಕನ್ನಡಪರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ಎಲ್ಲರ ಕೊಡುಗೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಇದು ಕೇವಲ ಪುರುಷರ ಹೋರಾಟವಲ್ಲ, ಮಹಿಳೆಯರೂ ಕನ್ನಡದ ಉಳಿವಿಗಾಗಿ ಮಹತ್ವದ ಹೋರಾಟ ನಡೆಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನಂತಹ ವೀರ ಮಹಿಳೆಯರ ಇತಿಹಾಸ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಉತ್ತರ ಕರ್ನಾಟಕದ ಕನ್ನಡ ಹೋರಾಟಗಾರರ ಕೊಡುಗೆಯನ್ನೂ ಗುರುತಿಸಿ, ಅಖಿಲ ಕರ್ನಾಟಕದ ದೃಷ್ಟಿಕೋನದಲ್ಲಿ ಕನ್ನಡದ ಹೋರಾಟವನ್ನು ಮುನ್ನಡೆಸಬೇಕಾಗಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಉಪಮೇಯರ್ ಹನುಮಂತ ಕೊಂಗಾಲಿ, ಶಾಸಕ ಆಸೀಫ್ ಸೇಠದ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ, ಡಿಸಿಪಿ ನಾರಾಯಣ ಭರಮನಿ, ರಾಜಕುಮಾರ ಟೋಪಣ್ಣವರ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
