
ಬೆಳಗಾವಿ
ಮರಕ್ಕೆ ಡಿಕ್ಕಿಯಾಗಿ ಕ್ರ್ಯೂಸರ್ ಪಲ್ಟಿಯಾಗಿ ಓರ್ವ ವೃದ್ಧ ಸಾವನ್ನಪ್ಪಿದ್ದು, 17 ಜನರಿಗೆ ಗಾಯವಗಿರುವ ಘಟನೆ ನಡೆದಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಹೊರವಲಯದಲ್ಲಿ ಭೀಕರ ಅಪಘಾತ ನಡೆದಿದೆ. ಕೂಲಿ ಕೆಲಸಕ್ಕೆ ತೆರಳಿ ವಾಪಸ್ ಆಗುವ ವೇಳೆ ಅವಘಡ ಸಂಭವಿಸಿದೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಿಂದ ಕೂಲಿ ಕೆಲಸಕ್ಕೆ 18 ಜನ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು, ಕೂಲಿ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ವಾಪಸ್ ಆಗುವಾಗ ದುರಂತ ಸಂಭವಿಸಿದೆ.
ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೆಂಚಪ್ಪ ಲಕ್ಷ್ಮಣ ಈರನ್ನವರ (60) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 17 ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ಸವದತ್ತಿ ಪೋಲಿಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
