
ಬೆಳಗಾವಿ
ಮಹಾನಗರ ಪಾಲಿಕೆಯಿಂದ ಇಲ್ಲಿನ ವಡಗಾವಿ ಅಕ್ಕಪಕ್ಕದ ಪ್ರದೇಶದ ಸರಾಫಗಲ್ಲಿ, ತೆಗ್ಗಿನಗಲ್ಲಿಯ ಚರಂಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವುದನ್ನು ಖಂಡಿಸಿ ಗುರುವಾರ ಇಲ್ಲಿನ ರಹವಾಸಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚೌಡೇಶ್ವರ ಗಲ್ಲಿಯ ಒಂದೇ ಭಾಗದಲ್ಲಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಕಳೆದ ಹದಿನೈದು ದಿನದಿಂದ ಚರಂಡಿಯಲ್ಲಿ ಕಸ ಸಂಗ್ರಹವಾಗಿ ದುರ್ನಾತ ಬಿರುತ್ತಿದ್ದು ಇಲ್ಲಿಯವರೆಗೂ ಶುಚಿಗೊಳಿಸಿಲ್ಲ ಎಂದು ದೂರಿದರು.
ಚೌಡೇಶ್ವರ ಗಲ್ಲಿಯ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಚೌಡೇಶ್ವರ ಗಲ್ಲಿಯಿಂದ ಧಾಮಣೆ ರಸ್ತೆಯ ಹೊಂದಿಕೊಂಡಿರುವ ಮಲ್ಲಿಕಾರ್ಜುನ ಯಳ್ಳೂರು ಎಂಬುವರ ಖುಲ್ಲಾ ಜಾಗದಲ್ಲಿ ವಡಗಾವಿಯ ರಹವಾಸಿಗಳು ಕಸ ಚೆಲ್ಲುತ್ತಿದ್ದಾರೆ. ಈ ಕುರಿತು ಪಾಲಿಕೆಯಿಂದ ಮಲ್ಲಿಕಾರ್ಜುನ ಅವರಿಗೆ ನೋಟಿಸ್ ನೀಡಿ ಅದನ್ನು ಶುಚಿಗೊಳಿಸಬೇಕೆಂದು ಆಗ್ರಹಿಸಿದರು.
ಜಯಶ್ರೀ ಕಾಂಬಳೆ, ಸಂಜ ಕಡಕೋಳ, ಎಚ್.ಎಂ.ಸರಾಫ್, ಪ್ರೀಯಾ ಕಾಂಬಳೆ, ಸರೀತಾ ಕಾಂಬಳೆ, ಕಲ್ಲಪ್ಪ ಗೋಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
