
ಬೆಳಗಾವಿ
ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಗಾಯರಾಣ ಜಮೀನು ಹಸ್ತಾಂತರ ಮಾಡದೆ, ಅತಿಕ್ರಮಣ ಮಾಡಿರುವ ಗಾಯರಾಣ ಜಮೀನು ತೆರವುಗೊಳಿಸಲು ಹಿಂದೆಟ್ಟು ಹಾಕುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಇಲ್ಲಿನ ಕುರಿಗಾಹಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂದುರ ಕುರಿಗಾರ, ಗುಡಸ ಗ್ರಾಮದ ಹದ್ದಿನಲ್ಲಿರುವ ರಿ.ಸ.ನಂ 401ರಲ್ಲಿ 23 ಗುಂಟೆ ಗಾಯರಾಣ ಜಮೀನು ಅತಿಕ್ರಮಣ ಮಾಡಲು ಬಿಟ್ಟಿರಲಿಲ್ಲ. ಆದರೆ ಇಲ್ಲಿನ ಕೆಲ ಜನರು ಈ ಜಮೀನನ್ನು ಅತಿಕ್ರಮಣ ಮಾಡಿಕೊಂಡು ನಮ್ಮ ಕುರಿಗಳನ್ನು ಮೇಯಿಸಲು ಗುಡ್ಡವೇ ಇಲ್ಲದಂತಾಗಿದೆ ಎಂದು ದೂರಿದರು.
ಗಾಯರಾಣ ಜಮೀನಲ್ಲಿ ಗ್ರಾಮ ದೇವತೆ ಲಗಮ್ಮವ್ವ ದೇವಸ್ಥಾನ ಇದೆ. ಈ ಜಮೀನು ದನ, ಕರುಗಳು ಹಾಗೂ ಕುರಿಗಳಿಗೆ ಮೀಸಲು ಇರುವ ಜಮೀನು. ಇಲ್ಲಿ ಗುಡ್ಡವೂ ಸಹ ಇದ್ದು, ಈ ಗುಡ್ಡದಿಂದ ಬಸಿ ನೀರಿನ ಕೆರೆಯೂ ಇದೆ. ಇದರ ನೀರನ್ನು 5 ಗ್ರಾಮದ ಕುರಿಗಳಿಗೆ ಅನುಕೂಲಕರವಾಗಿದೆ. ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಬಸವಣ್ಣಿ ನಿಡಸೋಸಿ ಮಾತನಾಡಿ, ಗುಡಸ ಗ್ರಾಮದ ಗಾಯರಾಣ ಜಮೀನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹುಕ್ಕೇರಿ ತಹಶಿಲ್ದಾರ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ. ಈಗಾಗಲೇ ಸಿಎಂ, ಡಿಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಬಸಪ್ಪ ವಂಟಮೂರಿ, ರಾಯಪ್ಪ ಪಾಮಲದಿನ್ನಿ, ಆನಂದ ಖಿಲಾರಿ, ಗುರುಸಿದ್ಧ ಗೋಟುರ, ಹಾಲಪ್ಪ ನೂಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
