
ರಾಯಬಾಗ:
ತಾಲೂಕಿನ ಸುಕ್ಷೇತ್ರ ದಿಗ್ಗೆವಾಡಿಯ ಪ್ರತಿಷ್ಠಿತ ಮಹಾಕಾಳಿ ಶಿಕ್ಷಣ ಸಂಸ್ಥೆಯ ದಿಗ್ಗೆವಾಡಿ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಡಾ. ವಿ. ಬಿ. ಚೌಗಲೆ ಅವರು ಪ್ರಸಕ್ತ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.
ಶಾಲಾ ಶಿಕ್ಷಣ ಇಲಾಖೆ, ಚಿಕ್ಕೋಡಿ ಉಪನಿರ್ದೇಶಕರು,ಚಿಕ್ಕೋಡಿ ಇವರು ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಪ್ರೌಢ ವಿಭಾಗದಲ್ಲಿ ಒಟ್ಟು 8 ಜನ ಶಿಕ್ಷಕರನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ರಾಯಬಾಗ ತಾಲೂಕಿನ ದಿಗ್ಗೆವಾಡಿಯ ಡಾ. ವಿ. ಬಿ. ಚೌಗಲೆ ಅವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಗಮನಾರ್ಹ.
ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಶಿಕ್ಷಕರ ದಿನೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ಸಂಪಾದನಾ ಚರಮೂರ್ತಿ ಮಠದ ಪೂಜ್ಯ ಮ.ನಿ ಪ್ರ.ಶ್ರೀ ಸಂಪಾದನಾ ಸ್ವಾಮೀಜಿ,ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ,ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ, ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸೀತಾರಾಮ್ ಆರ್ ಎಸ್ ಅವರು ಪ್ರಶಸ್ತಿ ಪುರಸ್ಕೃತ ಡಾ. ವಿ ಬಿ ಚೌಗಲೆ ಅವರಿಗೆ ಶಾಲು ಹೊದಿಸಿ ಪ್ರಮಾಣ ಪತ್ರ ನೀಡಿ ಸತ್ಕರಿಸಿ ಗೌರವಿಸಿದರು.
ಬಳಿಕ ಪ್ರಶಸ್ತಿ ಪುರಸ್ಕೃತರಾದ ವಿ.ಬಿ.ಚೌಗಲೆ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪಡೆದಿದ್ದು ಖುಷಿಯಾಗಿದೆ. ಸಾಧನೆಗೆ ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕರಾವ ಪಾಟೀಲ ಅವರಿಗೆ ಅಭಿನಂದಿಸುತ್ತೇನೆ ಎಂದರು. ಅನೇಕ ಗಣ್ಯರು ಶಿಕ್ಷಣ ಇಲಾಖೆಯ ಅಧಿಕಾರಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
