Monday, November 23, 2026
HomeBelagaviಟೆಂಡರ್ ನಲ್ಲಿ ಗೋಲ್ ಮಾಲ್ ಮಾಡಿದ ಸ್ಮಾರ್ಟ್ ಸಿಟಿ: ಲೋಕಾಯುಕ್ತಕ್ಕೆ ದೂರು ದಾಖಲು

ಟೆಂಡರ್ ನಲ್ಲಿ ಗೋಲ್ ಮಾಲ್ ಮಾಡಿದ ಸ್ಮಾರ್ಟ್ ಸಿಟಿ: ಲೋಕಾಯುಕ್ತಕ್ಕೆ ದೂರು ದಾಖಲು

ಬೆಳಗಾವಿ
ಬೆಳಗಾವಿ ಸ್ಮಾರ್ಟ್ ಸಿಟಿ ಟೆಂಡರ್ ನಲ್ಲಿ ಅವ್ಯವಹಾರದ ಹಗರಣ ನಡೆದಿರುವ ಕುರಿತು ಸಾಮಾಜಿಕ‌ ಕಾರ್ಯಕರ್ತ ಶ್ರೀನಿವಾಸ್ ರಾವ್ ಭಾನುವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸ್ಮಾರ್ಟ್ ಸಿಟಿ ಟೆಂಡರ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಈ‌ ಮೊದಲು ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಶ್ರೀನಿವಾಸ್ ರಾವ್ ಈಗ ಲೋಕಾಯುಕ್ತಕ್ಕೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಓಂಕಾರ ನಗರ ಪೇವರ್ ಬ್ಲಾಕ್ ರಸ್ತೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ವಿರೋಧ ವ್ಯಕ್ತವಾಗಿವೆ. ಓಂಕಾರ ನಗರ ಪ್ರದೇಶದಲ್ಲಿರುವ ರಸ್ತೆ ಈಗಾಗಲೇ ಉತ್ತಮ ಹಾಗೂ ಕಾರ್ಯನಿರ್ವಹಣೆಗೆ ಯೋಗ್ಯ ಸ್ಥಿತಿಯಲ್ಲಿದ್ದು, ಹಲವೆಡೆ ಗುಣಮಟ್ಟದ ಪೇವರ್ ಬ್ಲಾಕ್ ರಸ್ತೆ ನಿರ್ಮಾಣಗೊಂಡಿವೆ. ಇಂಥ ಪರಿಸ್ಥಿತಿಯಲ್ಲಿ, ಇಲ್ಲಿಯೇ ಮತ್ತೊಮ್ಮೆ ಪೇವರ್ ಬ್ಲಾಕ್ ರಸ್ತೆ ನಿರ್ಮಾಣದ ಹೆಸರಿನಲ್ಲಿ ಹೊಸ ಟೆಂಡರ್‌ಗಳನ್ನು ಕರೆಯುವ ಅಗತ್ಯತೆ ತಾಂತ್ರಿಕ ಮೌಲ್ಯಮಾಪನ, ಕಾರ್ಯಾತ್ಮಕ ಅವಶ್ಯಕತೆ ಅಥವಾ ಸಾರ್ವಜನಿಕ ಉಪಯೋಗದ ದೃಷ್ಟಿಯಿಂದ ಯಾವ ರೀತಿಯಿಂದಲೂ ಸಮರ್ಥನೀಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಸ್ಮಾಟ್೯ ಸಿಟಿಯಿಂದ ಕೇವಲ ಕಡತಗಳಲ್ಲಿ ಕಾಮಗಾರಿ ತೋರಿಸಿ ಹಣ ಪೋಲು ಮಾಡುವ ಅಥವಾ ಲೂಟಿ ಮಾಡುವ ಉದ್ದೇಶದಿಂದಲೇ ರೂಪಿಸಲಾಗಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಗತ್ಯವಿಲ್ಲದ ಕಾಮಗಾರಿಯನ್ನು ತುರ್ತು ಎಂದು ತೋರಿಸಿ ಟೆಂಡರ್ ಕರೆಯುವುದು, ಸಾರ್ವಜನಿಕ ತೆರಿಗೆ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅವಶ್ಯಕತೆಗಳ ಕಡೆಗೆ ಬಳಸಬೇಕಾದ ಸಾರ್ವಜನಿಕ ಸಂಪನ್ಮೂಲಗಳನ್ನು ದಿಕ್ಕು ತಪ್ಪಿಸುವ ಪರಿಣಾಮ ಉಂಟುಮಾಡುತ್ತವೆ. ಇದರಿಂದ ಕೇವಲ ಹಣಕಾಸು ನಷ್ಟವಲ್ಲ, ಅಭಿವೃದ್ಧಿ ಆದ್ಯತೆಗಳ ವಿಕೃತಿ ಮತ್ತು ಆಡಳಿತದ ಮೇಲಿನ ಜನನಂಬಿಕೆಯ ಗಂಭೀರ ಹಾನಿ ಉಂಟಾಗುತ್ತದೆ. ಆದ್ದರಿಂದ, ಓಂಕಾರ ನಗರ ಪೇವರ್ ಬ್ಲಾಕ್ ರಸ್ತೆ ಕಾಮಗಾರಿ ಕುರಿತ ಈ ಆರೋಪಗಳು ಸಾಮಾನ್ಯ ಆಕ್ಷೇಪಣೆಗಳಲ್ಲ; ಅವು ತಕ್ಷಣದ ಪರಿಶೀಲನೆ, ಹೊಣೆಗಾರಿಕೆ ನಿಶ್ಚಯ ಮತ್ತು ಆಡಳಿತಾತ್ಮಕ – ತಿದ್ದುಪಡಿ ಕ್ರಮಗಳನ್ನು ಅನಿವಾರ್ಯಗೊಳಿಸುವಷ್ಟು ಗಂಭೀರ ಸ್ವರೂಪದ್ದಾಗಿವೆ. ನಿರ್ದಿಷ್ಟ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಉದ್ದೇಶದ ಸಂಶಯ ಇನ್ನೂ ಗಂಭೀರವಾಗಿ, ಈ ಅನಧಿಕೃತ ಟೆಂಡರ್‌ಗಳನ್ನು ಈಗಾಗಲೇ ಅದೇ ಭಾಗದಲ್ಲಿ ಮಾಡಿರುವ ನಿರ್ದಿಷ್ಟ ಸಂಸ್ಥೆಗೆ ಮಾತ್ರ ಗುತ್ತಿಗೆ ನೀಡುವ ಉದ್ದೇಶದಿಂದಲೇ ರೂಪಿಸಲಾಗಿದೆ ಎಂಬ ವಿಚಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಟೆಂಡರ್ ವೇಳಾಪಟ್ಟಿಯ ವಿನ್ಯಾಸ, ಅಸಾಧ್ಯ ಗಡುವುಗಳು, ಹಾಗೂ ಕಾಮಗಾರಿಗಳ ಆಯ್ಕೆ ಪಾರದರ್ಶಕ ಸ್ಪರ್ಧೆಯನ್ನು ನಿರಾಕರಿಸಿ, ಪೂರ್ವನಿರ್ಧರಿತ ಗುತ್ತಿಗೆ ಹಂಚಿಕೆಯ ಸಂಶಯವನ್ನು ಬಲಪಡಿಸುತ್ತವೆ. ಇದು ಕರ್ನಾಟಕ ಸಾರ್ವಜನಿಕ ಖರೀದಿ ನಿಯಮಗಳ ಮೂಲ ತತ್ವಗಳಿಗೂ ಮತ್ತು ಭ್ರಷ್ಟಾಚಾರ ನಿರೋಧಕ ಕಾನೂನುಗಳ ಆತ್ಮಕ್ಕೂ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟೀಸ್ ಮಿಷನ್‌ನ ಡಿಸೆಂಬರ್ 2025ರ ಅಂತಿಮ ಗಡುವು ಅತ್ಯಂತ ಸಮೀಪದಲ್ಲಿರುವ ಈ ನಿರ್ಣಾಯಕ ಹಂತದಲ್ಲೂ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಹಾಗೂ ರಾಜ್ಯ ಹೈ ಪವರ್ ಸ್ಟೀರಿಂಗ್ ಸಮಿತಿಯ ಅಂತಿಮ ಮತ್ತು ಬಂಧನಕಾರಿ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅನಧಿಕೃತ ಟೆಂಡ‌ರ್ ಪ್ರಕ್ರಿಯೆಗಳು ಮುಂದುವರಿದರೆ, ಇದು ಕೇವಲ ನಿಯಮ ಉಲ್ಲಂಘನೆಯಾಗಿ ಉಳಿಯುವುದಿಲ್ಲ; ಬದಲಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣದ ಅಪರಿಹಾರ್ಯ ನಷ್ಟ ಸರ್ಕಾರದ ಪ್ರತಿಷ್ಠೆಗೆ ಗಂಭೀರ ಕಳಂಕವಾಗಿದೆ ಹಾಗೂ ಆಡಳಿತ ವ್ಯವಸ್ಥೆಯ ಮೇಲಿನ ಜನನಂಬಿಕೆಯ ಗಂಭೀರ ಕ್ಷಯಕ್ಕೆ ಕಾರಣವಾಗುತ್ತದೆ. ಈ ಹಂತದಲ್ಲಿ ತಕ್ಷಣದ ಆಡಳಿತಾತ್ಮಕ ಹಸ್ತಕ್ಷೇಪ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಂಟಾಗುವ ಯಾವುದೇ ಹಣಕಾಸು ನಷ್ಟ, ಕಾನೂನು ವಿವಾದಗಳು ಮತ್ತು ಆಡಳಿತಾತ್ಮಕ ಪರಿಣಾಮಗಳಿಗೆ ಸಂಬಂಧಿಸಿದ ಹೊಣೆಗಾರಿಕೆ, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ಮೇಲೇ ಬಿದ್ದಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ವಿರೇಂದ್ರ ಹಿರೇಮಠ, ಜನರಲ್ ಮ್ಯಾನೇಜರ್ (ಟೆಕ್ನಿಕಲ್), ಬೆಳಗಾವಿ ಸ್ಮಾರ್ಟ್ ಸಿಟಿ, ಶುಭಾ ಬಿ., ಮಾಜಿ ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ, ಅಭಿಷೇಕ ಮೀಂಡಿಗೇರಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬೆಳಗಾವಿ ಸ್ಮಾರ್ಟ್ ಸಿಟಿ, ಸಿದ್ದಗೊಂಡ, ಕಾರ್ಯನಿರ್ವಾಹಕ ಇಂಜಿನಿಯರ್, ಬೆಳಗಾವಿ ಸ್ಮಾರ್ಟ್ ಸಿಟಿ, ಮದನ್ ಹಂಚಿನಾಳ, ಸಹಾಯಕ ಇಂಜಿನಿಯರ್, ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.

Total Views 196
RELATED ARTICLES

Most Popular

Recent Comments

KNN City News
Home
E-Paper