
ಖಾನಾಪುರ
ಸಾರ್ವಜನಿಕರಿಗೆ ಅಗತ್ಯವಾದ ಅಡುಗೆ ಅನಿಲ ಪೂರೈಕೆಯಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ ಗ್ಯಾಸ್ ಏಜೆನ್ಸಿ ಸಿಬ್ಬಂದಿಯ ವರ್ತನೆಗೆ ಬೇಸತ್ತ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಖಾನಾಪುರ ತಾಲೂಕಿನ ಕೇರವಾಡ,ಗುಂಡೆನಟ್ಟಿ ಗ್ರಾಮದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಅಡುಗೆ ಅನಿಲ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಗ್ರಾಮಸ್ಥರು ದಿನನಿತ್ಯದ ಅಡುಗೆ ಕಾರ್ಯಗಳನ್ನು ನಿರ್ವಹಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಅನೇಕ ಕುಟುಂಬಗಳು ಗ್ಯಾಸ್ ಸಿಲಿಂಡರ್ಗಾಗಿ ಏಜೆನ್ಸಿಗೆ ಸುತ್ತಾಡುತ್ತಿದ್ದರೂ, ಗ್ಯಾಸ್ ಲಭ್ಯವಿಲ್ಲಎಂಬ ಕಾರಣ ನೀಡಿ ಸಿಬ್ಬಂದಿ ಗ್ರಾಹಕರನ್ನು ವಾಪಸ್ ಕಳುಹಿಸುತ್ತಿದ್ದರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲ ಗ್ರಾಮಸ್ಥರು ಏಜೆನ್ಸಿಗೆ ತೆರಳಿ ವಿಚಾರಿಸಿದಾಗ, ಅಲ್ಲಿ ಕೆಲಸ ನಿರ್ವಹಿಸಬೇಕಾದ ಸಿಬ್ಬಂದಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಚೇರಿಯಲ್ಲೇ ಮಲಗಿರುವುದು ಕಂಡುಬಂದಿದೆ. ಸಾರ್ವಜನಿಕ ಸೇವೆಗೆ ನೇಮಕಗೊಂಡ ಸಿಬ್ಬಂದಿಯ ಇಂತಹ ನಿರ್ಲಕ್ಷ್ಯಭರಿತ ನಡೆ ಗ್ರಾಮಸ್ಥರಲ್ಲಿ ಅಸಮಾಧಾನ ಹೆಚ್ಚಿಸಿತ್ತು.
ಇದಷ್ಟೇ ಅಲ್ಲದೆ, ಗ್ಯಾಸ್ ಬುಕ್ಕಿಂಗ್ ಸಂಬಂಧಿತ ದಾಖಲೆಗಳು ಹಾಗೂ ಬುಕ್ಗಳನ್ನು ಕಚೇರಿಯಲ್ಲೇ ಎಲ್ಲೆಂದರಲ್ಲಿ ಚೆಲ್ಲಿ ಇಡಲಾಗಿದ್ದು, ಕಚೇರಿಯು ಅಸ್ತವ್ಯಸ್ತ ಸ್ಥಿತಿಯಲ್ಲಿ ಇರುವುದೂ ಗಮನಕ್ಕೆ ಬಂದಿದೆ. ಸೇವೆ ಪಡೆಯಲು ಬಂದ ಗ್ರಾಹಕರು ಪ್ರಶ್ನಿಸಿದಾಗ, ಸಿಬ್ಬಂದಿ ಅವಾಚ್ಯ ಶಬ್ದಗಳನ್ನು ಬಳಸಿ ಅವಮಾನಕರವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಸಿಬ್ಬಂದಿಯ ಈ ಅಸಭ್ಯ ಹಾಗೂ ಜವಾಬ್ದಾರಿಯಿಲ್ಲದ ವರ್ತನೆಗೆ ಕೋಪಗೊಂಡ ಸ್ಥಳೀಯರೊಬ್ಬರು ಏಜೆನ್ಸಿಗೆ ಧರ್ಮದೇಟು ನೀಡಿದ್ದಾರೆ. ಈ ಘಟನೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು.
ಘಟನೆಯ ಬಳಿಕ ಗ್ರಾಮಸ್ಥರು ಏಜೆನ್ಸಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿಸಿದ ಮೇಲಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ತವ್ಯ ಸಮಯದಲ್ಲಿ ಮದ್ಯಪಾನ ಮಾಡಿ ಕೆಲಸ ನಿರ್ವಹಿಸುವ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ಯಾಸ್ ಪೂರೈಕೆಯನ್ನು ನಿಯಮಿತವಾಗಿ ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೇವೆಯಲ್ಲಿ ಈ ರೀತಿಯ ನಿರ್ಲಕ್ಷ್ಯ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
