
ಬೆಳಗಾವಿ
ಬೆಳಗಾವಿ ತಾಲೂಕಿನ ಕೊಂಡುಸಕೊಪ್ಪ ಗ್ರಾಮದಲ್ಲಿ ವೈಕ್ತಿಕ ಕಾರಣ ಹಾಗೂ ದೇವಸ್ಥಾನದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ 9 ಜನರ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನರಸೋಬಾ ಕರೆಪ್ಪ ಸಾಂಬ್ರೇಕರ ಕುಟುಂಬದೊಂದಿಗೆ ಯಾರೂ ಮಾತನಾಡಬಾರದು ಎಂದು ಗ್ರಾಮ ಪಂಚಾಯಿತಿಯ ಪಂಚರು ಬಹಿಷ್ಕಾರ ಹಾಕಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರೆ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಲ್ಲಪ್ಪ ಸಾಂಬ್ರೇಕರ, ವಿಠ್ಠಲ ಸಾಂಬ್ರೇಕರ, ಬಾಗಣ್ಣ ಸಾಂಬ್ರೇಕರ, ರಮೇಶ್ ಸಾಂಬ್ರೇಕರ, ಮಾಳಿಂಗ ಸಾಂಬ್ರೇಕರ, ಗಂಗಪ್ಪ ಸಾಂಬ್ರೇಕರ, ವೈಜು ಸಾಂಬ್ರೇಕರ, ಪಿರಾಜಿ ಸಾಂಬ್ರೇಕರ ಹಾಗೂ ಯಲ್ಲಪ್ಪ ಸಾಂಬ್ರೇಕರ ಮೇಲೆ ರೇಣುಕಾ ಸಾಂಬ್ರೇಕರ್ ದೂರು ದಾಖಲಿಸಿದ್ದಾರೆ.
ನರಸೋಬಾ ಕುಟುಂಬದವರೊಂದಿಗೆ ಗ್ರಾಮಸ್ಥರು ಮಾತನಾಡಿದರೆ 5,000 ದಂಡ ವಿಧಿಸುವುದಾಗಿ ಹಾಗೂ ಮಾತನಾಡಿದವರ ಬಗ್ಗೆ ಮಾಹಿತಿ ನೀಡಿದವರಿಗೆ 1,000 ಬಹುಮಾನ ನೀಡುವುದಾಗಿ ಪಂಚರು ಘೋಷಣೆ ಮಾಡಿದ್ದರೆಂದು ಆರೋಪಿಸಲಾಗಿದೆ.
ಈ ಬಗ್ಗೆ ರೇಣುಕಾ ಅವರು ಕಳೆದ ತಿಂಗಳ 6ರಂದು ದೂರು ನೀಡಿದ್ದು, ಅದರ ಅನ್ವಯ ಇದೀಗ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಹೀರೆ ಬಾಗೇವಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
