
ಬೆಳಗಾವಿ
ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು “ಬ್ಯಾಡ್ ಬಾಯ್ಸ್”, “ಟಗರು ಬಾಯ್ಸ್”, “ಕಿಂಗ್ ಮೇಕರ್” ಎಂಬ ಹೆಸರಿನಲ್ಲಿ ರೌಡಿಶೀಟರ್ಗಳು ಮಕ್ಕಳನ್ನು ಬಳಸಿಕೊಂಡು ರೀಲ್ಸ್ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿರುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಂಥ ಚಟುವಟಿಕೆಗಳ ವಿರುದ್ಧ ಮುಲ್ಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲು ಹಾಗೂ ಯುವಕರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಕೆಲ ರೌಡಿಶೀಟರ್ಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಪ್ರಾಪ್ತ ಮಕ್ಕಳನ್ನು ಮುಂದೆ ನಿಲ್ಲಿಸಿ ಗ್ಯಾಂಗ್ ಶೈಲಿಯ ವಿಡಿಯೋ, ರೀಲ್ಸ್ ಮತ್ತು ಫೋಟೋಗಳನ್ನು ಹರಿಬಿಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸರಿಯಾಗಿ ಬದುಕಬೇಕಾದರೆ ಎಲ್ಲರೂ ‘ಗುಡ್ ಬಾಯ್ಸ್’ ಆಗಿರಬೇಕು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಲು ಮಕ್ಕಳನ್ನು ಬಳಸಿಕೊಂಡು ರೌಡಿಸಂ ಪ್ರದರ್ಶಿಸುತ್ತಿರುವುದು ಸಹಿಸಲ್ಲ ಎಂದರು.
ಆದೇಶ ಪಾಲಿಸದಿದ್ದರೆ ಸಂಬಂಧಪಟ್ಟ ರೌಡಿಶೀಟರ್ಗಳ ವಿರುದ್ಧ ಗಡಿಪಾರು ಕ್ರಮ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳ ನಿಗಾ ವಹಿಸಲಾಗಿದೆ. ಹೆಚ್ಚಿಪೊಲೀಸ್ ಇಲಾಖೆ ಇಂಥ ಪ್ರಕರಣಗಳ ಮೇಲೆ ನಿಗಾ ಇಟ್ಟಿದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಷಕರು ಕೂಡ ಮಕ್ಕಳನ್ನು ಇಂಥ ಚಟುವಟಿಕೆಗಳಿಂದ ದೂರವಿಡಬೇಕು ಎಂದರು.
ಸಿನಿಮಾ ನೋಡಿ, ತಲ್ವಾರ್ ಹಿಡಿದು ಕೇಕ್ ಕಟ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಗಳು ಸಣ್ಣ ಸಣ್ಣ ಮಕ್ಕಳ ಜೊತೆಗೆ ಸೇರಿ ವಿಡಿಯೋ ಮಾಡಿ ಭಯ ಹುಟ್ಟಿಸುವ 18 ಜನರನ್ನು ಗಡಿಪಾರು ಮಾಡಲಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಒಂದೂವರೆ ತಿಂಗಳಲ್ಲಿ 18 ಜನರನ್ನು ಗುರಿತಿಸಲಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ರೌಡಿ ಶೀಟರ್ ಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಅಂಥವರು ಪದೇ ಪದೇ ಕಾನೂನು ಉಲ್ಲಂಘನೆ ಮಾಡಿದರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
