
ಬೆಳಗಾವಿ
ಬೆಳಗಾವಿ ನಗರದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರ ಪೊಲೀಸ್ ಇಲಾಖೆ “ಆ್ಯಂಟಿ ಸ್ಟಾಬಿಂಗ್ ಸ್ವಾಡ್” ಮೂಲಕ ವಿಶೇಷ ಕಾರ್ಯಾಚರಣೆಯಲ್ಲಿ ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಹರಿತವಾದ ಆಯುಧಗಳನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.
ಬೆಳಗಾವಿ ನಗರದ ಕಾಕತಿವೇಸ್ ನಲ್ಲಿ ಹಾಫ್ ಪ್ಯಾಂಟ್ ಜೇಬಿನಲ್ಲಿ ಹರಿತವಾದ ಚಾಕು ಇಟ್ಟುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಆ್ಯಂಟಿ ಸ್ಟಾಬಿಂಗ್ ಸ್ವಾಡ್ ಬಂಧಿಸಿ ಹರಿತವಾದ ಚಾಕು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.
ಶಶಿಕಾಂತ ಅರಕೇರಿ (27) ಬಂಧಿತ ಆರೋಪಿ. ನಗರದ ಕೊನವಾಳ ಗಲ್ಲಿಯಲ್ಲಿ ಸ್ವಾಡ್ ತಂಡಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಶಶಿಕಾಂತ ಹರಿತವಾದ ಚಾಕುವನ್ನು ತನ್ನ ಹಾಫ್ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿರುವುದು ಪತ್ತೆಯಾಗಿದೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಡೇಬಜಾರ ಠಾಣೆಯ ಪಿಎಸ್‌ಐ ಆನಂದ ಅದಗೊಂಡ ಹಾಗೂ ಸಿಬ್ಬಂದಿ ಆರೋಪಿತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಚಾಕುವನ್ನು ಜಪ್ತಪಡಿಸಿಕೊಂಡಿದ್ದಾರೆ.
ಇನ್ನೊಂದು ಕಡೆ ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲವಾರ ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಣಬರ್ಗಿಯ ಜ್ಯೋತಿರ್ಲಿಂಗ್ ಗಲ್ಲಿಯಲ್ಲಿ ಅಮೋಲ ವಾಫೆ (30) ಬಂಧಿತ ಆರೋಪಿ. ಕಬ್ಬಿಣದ ತಲವಾರ ಹಿಡಿದು ಜಳಪಳಿಸುತ್ತಿದ್ದು, ಯಾವುದೋ ಅಪರಾಧಿಕ ಕೃತ್ಯ ಎಸಗುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ತಲ್ವಾರ್ ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಠಾಣೆಯ ಪಿಎಸ್‌ಐ ಶ ಪಿ.ಎಂ. ಮೋಹಿತೆ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ತಲವಾರ ಸಮೇತ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮಾರಕಾಸ್ತ್ರ ಹೊಂದಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿರುವ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಮಾರಕಾಸ್ತ್ರ ಹಿಡಿದುಕೊಂಡು ತಿರುಗಾಡುವವರ ವಿರುದ್ಧ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.
