
ಬೆಳಗಾವಿ
ಸಾಕು ನಾಯಿಯ ಸಾವಿನ ವಿಚಾರಕ್ಕೆ ಸಂಬಂಧಿಸಿ ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಕಲ್ಮೇಶ್ವರ ನಗರದಲ್ಲಿ ನಡೆದಿದ್ದು, ಗುರುವಾರ ಸಂಜೆ ವೃದ್ಧ ದಂಪತಿ ನ್ಯಾಯಕ್ಕಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ.
ಶಾಂತಾ ರಜಾಯಿ ಹಾಗೂ ಭೈರು ರಜಾಯಿ ಎಂಬ ವೃದ್ಧ ದಂಪತಿ ಮೇಲೆ ನೆರೆಯ ನಿವಾಸಿಗಳಾದ ಸುಗಂಧ ಲಾಡ್ ಹಾಗೂ ಅವರ ಪುತ್ರ ನಂದು ಲಾಡ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಕು ನಾಯಿ ಸಾವನ್ನಪ್ಪಿದ ಹಿನ್ನೆಲೆ “ನಾಯಿಯನ್ನು ನೀವೇ ಕೊಂದಿದ್ದೀರಾ” ಎಂದು ಆರೋಪಿಸಿ ತಾಯಿ-ಮಗ ಇಬ್ಬರು ಏಕಾಏಕಿ ವೃದ್ಧ ದಂಪತಿ ಮನೆಗೆ ಬಂದು ಜಗಳ ಆರಂಭಿಸಿ ನಂತರ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವೇಳೆ ಶಾಂತಾ ರಜಾಯಿ ಅವರ ಕೈಗೆ ತೀವ್ರ ಗಾಯವಾಗಿದ್ದು, ಕೈ ಮುರಿದಿದೆ. ಇದೇ ವೇಳೆ ಭೈರು ರಜಾಯಿ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ರಕ್ತಸ್ರಾವಗೊಂಡ ಹಿನ್ನೆಲೆ ತಕ್ಷಣ ಸ್ಥಳೀಯರು ಹಾಗೂ ಕುಟುಂಬಸ್ಥರು ಅವರನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ .
ಘಟನೆ ಕುರಿತು ಮಾತನಾಡಿದ ವೃದ್ಧ ದಂಪತಿ, “ನಾಯಿ ಸಾವಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಅನಾವಶ್ಯಕ ಆರೋಪ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಆರೋಪಿಸಿದ್ದಾರೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
