
ಬೆಳಗಾವಿ
4,500 ಕೋಟಿ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಅವರನ್ನು ಮತ್ತೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಳಗಾವಿಯ ಶಿವಬಸವ ನಗರದ ನಿವಾಸದಿಂದ ಅವರನ್ನು ಅಧಿಕಾರಿಗಳು ವಿಚಾರಣೆಗೆ ಕರೆತಂದಿದ್ದಾರೆ.
ನಿನ್ನೆ ಮಧ್ಯರಾತ್ರಿ ವರೆಗೆ ಶಿವಾನಂದ ನೀಲಣ್ಣವರ್ ಅವರನ್ನು ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿ ಬಳಿಕ ಮನೆಗೆ ಕಳುಹಿಸಿದ್ದರು. ಆದರೆ ಪ್ರಕರಣದ ಗಂಭೀರತೆ ಹಿನ್ನೆಲೆ ಇಂದು ಮತ್ತೆ ವಿಚಾರಣೆ ಆರಂಭಿಸಲಾಗಿದೆ.
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಶಿವಾನಂದಗೆ ಸೇರಿದ ಪ್ಲ್ಯಾಟ್ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಆಮಿಷವೊಡ್ಡಿ ಹಣ ಸಂಗ್ರಹಿಸಿ ದುರುಪಯೋಗ ಮಾಡಿಕೊಂಡ ಆರೋಪ ಕೇಳಿಬಂದಿದೆ. ಸುಮಾರು 45 ಸಾವಿರಕ್ಕೂ ಅಧಿಕ ಜನರಿಂದ ಹಣ ಸಂಗ್ರಹಿಸಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೇ, ನಿಯಮಗಳನ್ನು ಉಲ್ಲಂಘಿಸಿ ಹಣ ಸಂಗ್ರಹಿಸಿರುವ ಆರೋಪದಡಿ ತನಿಖೆ ಚುರುಕುಗೊಂಡಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶದಡಿ ಕಾರ್ಯಾಚರಣೆ ನಡೆಯುತ್ತಿದ್ದು, ನಿನ್ನೆವರೆಗೆ ನಾಲ್ಕು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಶಿವಾನಂದ ನೀಲಣ್ಣವರ್ ಸಾಮ್ರಾಜ್ಯದ ಹಲವು ಅಂಶಗಳು ತನಿಖೆಯಲ್ಲಿ ಬಯಲಾಗುತ್ತಿವೆ.
