Monday, November 23, 2026
HomeBelagaviನೀಲಣ್ಣವರ ವಂಚನೆ ಆರೋಪ: ಬ್ಯಾಂಕ್ ಅಧಿಕಾರಿಗಳು ಶಾಮಿಲು ಶಂಕೆ

ನೀಲಣ್ಣವರ ವಂಚನೆ ಆರೋಪ: ಬ್ಯಾಂಕ್ ಅಧಿಕಾರಿಗಳು ಶಾಮಿಲು ಶಂಕೆ

ಬೆಳಗಾವಿ

ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವ 4,500 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಕೊಂಡಿರುವ ಶಿವಾನಂದ ನೀಲಣ್ಣವರ್ ವಿರುದ್ಧದ ತನಿಖೆ ಇದೀಗ ಬ್ಯಾಂಕ್ ಅಧಿಕಾರಿಗಳ ಪಾತ್ರದತ್ತವೂ ವಿಸ್ತರಿಸುತ್ತಿದೆ ಎಂಬ ಅನುಮಾನಗಳು ಮೂಡಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹ ಮಾಡಲಾಗಿದ್ದು, ಆನ್‌ಲೈನ್ ವ್ಯವಹಾರಗಳ ಮೂಲಕವೇ ಎರಡೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕಾಸು ವಹಿವಾಟು ನಡೆದಿದ್ದರೂ ಸಂಬಂಧಿಸಿದ ಬ್ಯಾಂಕ್‌ಗಳು ಯಾವುದೇ ಅನುಮಾನ ವ್ಯಕ್ತಪಡಿಸದೇ ಮೌನ ವಹಿಸಿದ್ದೇಕೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಬ್ಯಾಂಕ್ ಖಾತೆಗಳನ್ನು ತನಿಖಾಧಿಕಾರಿಗಳು ಫ್ರೀಜ್ ಮಾಡಿದ್ದು, ಒಂದೊಂದು ಖಾತೆಯಲ್ಲಿ ನೂರಾರು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ಜಮೆಯಾಗುತ್ತಿದ್ದು, ಇದೇ ಖಾತೆಗಳಿಂದ ತಿಂಗಳಿಗೆ 75 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಹೂಡಿಕೆದಾರರಿಗೆ ಬಡ್ಡಿ ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತಂತೆ.
ಇಷ್ಟೊಂದು ದೊಡ್ಡ ಪ್ರಮಾಣದ ಹಣ ವರ್ಗಾವಣೆ ನಡೆದಿದ್ದರೂ ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಣಕಾಸು ಗುಪ್ತಚರ ಘಟಕ, ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ಗಮನಕ್ಕೆ ತರಬೇಕಿದ್ದ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಬ್ಯಾಂಕ್‌ಗಳು ಮೌನವಾಗಿದ್ದೇಕೆ ಎಂಬ ಪ್ರಶ್ನೆ ತನಿಖೆಯ ಕೇಂದ್ರಬಿಂದುವಾಗಿದೆ.
ಮೂರು ಖಾಸಗಿ ಬ್ಯಾಂಕ್‌ಗಳ ನಾಲ್ಕು ಖಾತೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದಿರುವ ಮಾಹಿತಿ ಸಿಕ್ಕಿದ್ದು, ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಿದೆಯೇ ಎಂಬ ಅನುಮಾನ ಗಾಢವಾಗಿದೆ. ಶಿವಾನಂದ ನೀಲಣ್ಣವರ್ ಜೊತೆ ಕೆಲವು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರೇ ಎಂಬ ದಿಕ್ಕಿನಲ್ಲಿ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಸಿಐಡಿ ತನಿಖೆ ಮುಂದುವರಿದಂತೆ ಬ್ಯಾಂಕ್ ಅಧಿಕಾರಿಗಳ ಕಳ್ಳಾಟವೂ ಬಯಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Total Views 146
RELATED ARTICLES

Most Popular

Recent Comments

KNN City News
Home
E-Paper