
ಬೆಳಗಾವಿ: ಜಿಲ್ಲೆಯ ಪತ್ರಕರ್ತರ ಬಗ್ಗೆ ಅವಹೇಳನಕಾರಿ ಹಾಗೂ ಆಧಾರರಹಿತ ಹೇಳಿಕೆಗಳನ್ನು ನೀಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಇಬ್ಬರು ಯೂಟ್ಯೂಬರ್ಗಳು ಇದೀಗ ಬಹಿರಂಗವಾಗಿ ಕ್ಷಮೆಯಾಚಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸ್ವಯಂ ಘೋಷಿತ ಪತ್ರಕರ್ತರೆಂದು ಗುರುತಿಸಿಕೊಂಡಿರುವ ಬಾಪುಗೌಡ ಪಾಟೀಲ್ ಹಾಗೂ ಸದಾನಂದ ಬಾಮ್ಮೆ ಎಂಬ ಇಬ್ಬರು ಯೂಟ್ಯೂಬರ್ಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಾಗೂ ತಮ್ಮ ಯೂಟ್ಯೂಬ್ ವಾಹಿನಿಗಳ ಮೂಲಕ ಜಿಲ್ಲೆಯ ಪತ್ರಕರ್ತರ ವಿರುದ್ಧ ತೀವ್ರ ಟೀಕೆಗಳನ್ನು ಮಾಡುತ್ತಿದ್ದರು. “ಬೆಳಗಾವಿ ಪತ್ರಕರ್ತರು ಮಾರಾಟವಾಗಿದ್ದಾರೆ”, “ಭಯೋತ್ಪಾದಕರಿಗೆ ಸಮರಾಗಿದ್ದಾರೆ” ಎಂಬ ಗಂಭೀರ ಮತ್ತು ಅವಹೇಳನಕಾರಿ ಆರೋಪಗಳನ್ನು ಮಾಡುವ ಮೂಲಕ ಪತ್ರಕರ್ತರ ಸಮುದಾಯದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದರು.
ಇದರ ಜೊತೆಗೆ, “ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಹಗರಣಗಳನ್ನು ನಾವೇ ಬಯಲಿಗೆಳೆಯುತ್ತಿದ್ದೇವೆ. ಉಳಿದ ಯಾವ ಮಾಧ್ಯಮಗಳೂ ಧ್ವನಿ ಎತ್ತುವುದಿಲ್ಲ” ಎಂದು ಹೇಳುವ ಮೂಲಕ ಜಿಲ್ಲೆಯ ಪ್ರಮುಖ ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರ ಕಾರ್ಯವೈಖರಿಯನ್ನು ಹೀಯಾಳಿಸುವ ಮಾತುಗಳನ್ನು ಆಡುತ್ತಿದ್ದರು. ಅಲ್ಲದೇ, “ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿ ಜಿಲ್ಲೆಯ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ” ಎಂಬ ಆರೋಪಗಳನ್ನು ಪದೇಪದೇ ಮಾಡುತ್ತಾ ಮಾಧ್ಯಮ ವಲಯದ ವಿರುದ್ಧ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಯತ್ನ ನಡೆಸಿದ್ದರು.
ಈ ಹೇಳಿಕೆಗಳು ಬೆಳಗಾವಿಯ ಪತ್ರಕರ್ತರ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು. ಹಲವು ಹಿರಿಯ ಪತ್ರಕರ್ತರು, ಕನ್ನಡಪರ ಹೋರಾಟಗಾರರು ಹಾಗೂ ಸಾಮಾಜಿಕ ಸಂಘಟನೆಗಳು ಈ ರೀತಿಯ ಹೇಳಿಕೆಗಳನ್ನು ಖಂಡಿಸಿ, ಪತ್ರಕರ್ತರ ಗೌರವಕ್ಕೆ ಧಕ್ಕೆ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಇಬ್ಬರು ಯೂಟ್ಯೂಬರ್ಗಳು ತಮ್ಮ ತಪ್ಪಿನ ಅರಿವಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. “ನಾವು ನೀಡಿದ ಕೆಲವು ಹೇಳಿಕೆಗಳು ಪತ್ರಕರ್ತರ ಭಾವನೆಗೆ ನೋವುಂಟುಮಾಡಿವೆ. ಅದು ತಪ್ಪಾಗಿದೆ. ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ” ಎಂದು ಒಪ್ಪಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಪತ್ರಕರ್ತರು ಕನ್ನಡ ನಾಡು, ನುಡಿ, ಗಡಿ ಹಾಗೂ ಸಂಸ್ಕೃತಿ ವಿಚಾರಗಳಲ್ಲಿ ಸದಾ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಗಡಿ ವಿಚಾರ, ಕನ್ನಡ ಪರ ಹೋರಾಟಗಳು, ಪ್ರವಾಹ ಪರಿಸ್ಥಿತಿ, ರೈತರ ಸಮಸ್ಯೆಗಳು, ಸಾಮಾಜಿಕ ಹೋರಾಟಗಳು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಮಹತ್ವದ ವಿಚಾರವನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರವಹಿಸಿದ್ದಾರೆ.
ಮಳೆ, ಬಿಸಿಲು, ಪ್ರವಾಹ, ಗಡಿ ಉದ್ವಿಗ್ನತೆ ಸೇರಿದಂತೆ ಯಾವುದೇ ಸವಾಲಿನ ಪರಿಸ್ಥಿತಿಯಲ್ಲಿಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿರುವ ಪತ್ರಕರ್ತರ ಸೇವೆಯನ್ನು ಜಿಲ್ಲೆಯ ಜನರು ಸದಾ ಗೌರವದಿಂದ ನೋಡುತ್ತಾರೆ. ಬೆಳಗಾವಿ ಜಿಲ್ಲೆ ರಾಜ್ಯದ ಮಟ್ಟದಲ್ಲಿ ಸದಾ ಸುದ್ದಿಯಲ್ಲಿರುವ ಪ್ರಮುಖ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಲ್ಲಿ ಇಲ್ಲಿನ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ.
ವೈಯಕ್ತಿಕ ಪ್ರಚಾರ, ದ್ವೇಷ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಉದ್ದೇಶದಿಂದ ಪ್ರಾಮಾಣಿಕ ಪತ್ರಕರ್ತರನ್ನು ಹೀಯಾಳಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಮಾಜದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಮಾಧ್ಯಮ ಕ್ಷೇತ್ರದ ಗೌರವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಬೆಳಗಾವಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
