
ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಠೇವಣಿದಾರರಿಗೆ ವಂಚನೆ ಆರೋಪದ ಬಳಿಕ ಜಿಲ್ಲೆಯಲ್ಲಿ ಇನ್ನೂ ನಾಲ್ಕು ಪೋಂಜಿ (ವಂಚಕ) ಕಂಪನಿಗಳ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ಬಂದಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಕನ್ನಡಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಿಂದಿನ ತಿಂಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಂಚನೆ ಸೇಲ್ ನ್ನು ಕೆಪಿಐಡಿ ಹಾಗೂ ಬಡ್ಸ್ ಕಾನೂನು ಅಡಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಕೆಪಿಐಡಿಯಲ್ಲಿ ಕಳೆದ 2025ರಲ್ಲಿ ಒಂದು ಸಂಶೋಧನೆಯಾಗಿದೆ. ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗೆ ಬಹಳಷ್ಟು ಅಧಿಕಾರ ವಹಿಸಿದ್ದಾರೆ. ಅದರಂತೆ ಜಿಲ್ಲಾಮಟ್ಟದ ಕಮಿಟಿ ರಚನೆ ಮಾಡಲಾಗಿದೆ ಎಂದರು.
ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ಬರುವ ಸುದ್ದಿ ಅಥವಾ ಯಾರಾದರೂ ಬಂದು ದೂರು, ಅನಾಮಧೇಯ ದೂರುಗಳನ್ನು ಪರಿಗಣಿಸಿ,ಮಾಹಿತಿ ಸಂಗ್ರಹಿಸುತ್ತೇವೆ. ಜಿಲ್ಲೆಯಲ್ಲಿ ಸಾಕಷ್ಟು ದೂರುಗಳು ಬಂದಿವೆ. ನಾನು ನಗರ ಪೊಲೀಸ್ ಆಯುಕ್ತರ ಜೊತೆಗೂ ಚರ್ಚೆ ಮಾಡಿದ್ದೇನೆ. ನಮ್ಮ ಬಳಿ ಇನ್ನೂ ನಾಲ್ಕು ಪೋಂಜಿ ( ವಂಚನೆ) ಕಂಪನಿಯಲ್ಲಿ ಒಂದು ಕಂಪನಿ 5% ಬಡ್ಡಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಅವರ ಮೇಲೆ ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದರು.
ನಗರ ಪೊಲೀಸ್ ಆಯುಕ್ತರು ಡಿಜಿಟಲ್ ತನಿಖೆ ನಡೆಸುತ್ತಿದ್ದಾರೆ. ಆ ವರದಿ ಬಂದ ಬಳಿಕ ಆ ಪೋಂಜಿ ( ವಂಚಕ) ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ದೊಡ್ಡ ದೊಡ್ಡ ಬ್ಯಾಂಕ್ ಗಳು ವರ್ಷಕ್ಕೆ 9% ಬಡ್ಡಿ ಕೊಡಲು ಆಗುವುದಿಲ್ಲ. ಸಾರ್ವಜನಿಕರು ಹಣದ ಆಸೆಗೆ ಬಲಿಯಾಗಬಾರದು. ಇಂಥ ಕಂಪನಿಯಲ್ಲಿ ಹಣ ಠೇವಣಿ ಇಟ್ಟರೆ ನಿಮ್ಮ ಹಣ ಸುರಕ್ಷಿತವಾಗಿರಲ್ಲ. ಜಿಲ್ಲೆಯಲ್ಲಿ ಪೋಂಜಿ (ವಂಚನೆ) ಕಂಪನಿಂದ ಮುಕ್ತ ಮಾಡುತ್ತೇವೆ. ಹಿಂದಿನ ವರ್ಷ ಮೈಕ್ರೋ ಫೈನಾನ್ಸ್ ವಂಚನೆಯಾಗಿದೆ ಎಂದು ಮಹಿಳೆಯರು ಬಂದು ದೂರು ನೀಡಿದ್ದರು. ಈಗ ನಾವು ಇಂಥ ವಂಚಕ ಕಂಪನಿಗಳು ತಳಮಟ್ಟದಲ್ಲಿಯೇ ಹಿಡಿದು ಮಟ್ಟ ಹಾಕುತ್ತೇವೆ. ಠೇವಣಿದಾರರಿಗೆ ಮರಳಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ ಎಂದರು.
