![]()
ಬೆಳಗಾವಿ
ವಿದೇಶದಲ್ಲಿ ದಂತ ಚಿಕಿತ್ಸಕನಾಗಿರುವುದಾಗಿ ಹೇಳಿಕೊಂಡ ವ್ಯಕ್ತಿಯ ಮಾತುಗಳನ್ನು ನಂಬಿದ ನಗರದ ಯುವತಿಯೊಬ್ಬರು 3.38 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಅಶ್ವಿನಿ (ಹೆಸರು ಬದಲಿಸಲಾಗಿದೆ) ಎಂಬ ಯುವತಿ ಮ್ಯಾಟ್ರಿಮೋನಿ ಆ್ಯಪ್ನಲ್ಲಿ ನೋಂದಾಯಿಸಿಕೊಂಡಿದ್ದ ವೇಳೆ ಆರ್ಯನ್ಕುಮಾರ ಎಂಬಾತ ಪರಿಚಯ ಮಾಡಿಕೊಂಡಿದ್ದ. ತಾನು ಮೂಲತಃ ಹೈದರಾಬಾದ್ನವನಾಗಿದ್ದು, ಸದ್ಯ ನೆದರಲ್ಯಾಂಡ್ನಲ್ಲಿ ದಂತ ಚಿಕಿತ್ಸಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಅಲ್ಲದೆ, ಮದುವೆಗೆ ತನ್ನ ಕುಟುಂಬದವರೂ ಒಪ್ಪಿಗೆ ನೀಡಿದ್ದಾರೆ ಎಂದು ನಂಬಿಕೆ ಮೂಡಿಸಿದ್ದಾನೆ.
ಮೇ 25ರಂದು ನೆದರಲ್ಯಾಂಡ್ನಿಂದ ಬೆಳಗಾವಿಗೆ ಬಂದು ಭೇಟಿ ಮಾಡುವುದಾಗಿ ತಿಳಿಸಿದ್ದ ಆರ್ಯನ್, ಮೇ 26ರಂದು ಕರೆ ಮಾಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿದ್ದಾನೆ. ಬಳಿಕ ಫೋನ್ನಲ್ಲಿ ಮಾತನಾಡಿದ ಅಪರಿಚಿತ ಮಹಿಳೆಯೊಬ್ಬಳು, ಆರ್ಯನ್ ಬಳಿ ಹೆಚ್ಚಿನ ಪ್ರಮಾಣದ ವಿದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಲು 85,800 ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾಳೆ.
ಇದನ್ನು ನಂಬಿದ ಅಶ್ವಿನಿ, ಸೂಚಿಸಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾಳೆ. ನಂತರ ಅದೇ ಮಹಿಳೆ ಮತ್ತೆ ಕರೆ ಮಾಡಿ, “ಆರ್ಯನ್ ಬಳಿ ಚಿನ್ನ ಹಾಗೂ ವಜ್ರಗಳಿದ್ದು, ಅವುಗಳಿಗೆ ಜಿಎಸ್ಟಿ ಪಾವತಿಸಲು 2.53 ಲಕ್ಷ ಅಗತ್ಯವಿದೆ ಎಂದು ತಿಳಿಸಿದ್ದಾಳೆ. ಈ ಮಾತನ್ನೂ ನಂಬಿದ ಯುವತಿ ಮತ್ತಷ್ಟು ಹಣ ಜಮೆ ಮಾಡಿದ್ದಾಳೆ.
ಒಟ್ಟು 3.38 ಲಕ್ಷ ಹಣ ವರ್ಗಾವಣೆ ಮಾಡಿದ ಬಳಿಕ ತಾನು ಮೋಸಕ್ಕೆ ಒಳಗಾಗಿರುವುದು ತಿಳಿದು ಬಂದಿದ್ದು, ನಗರ ಸೈಬರ್ ಅಪರಾಧ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೈಬರ್ ಪೊಲೀಸರು, ಮ್ಯಾಟ್ರಿಮೋನಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತರ ಮಾತುಗಳನ್ನು ಸುಲಭವಾಗಿ ನಂಬಬಾರದು. ವಿದೇಶದಿಂದ ಉಡುಗೊರೆ, ಕರೆನ್ಸಿ, ಚಿನ್ನ ಅಥವಾ ಕಸ್ಟಮ್ಸ್ ಶುಲ್ಕದ ಹೆಸರಿನಲ್ಲಿ ಹಣ ಕೇಳಿದರೆ ಅದು ವಂಚನೆಯಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
