
ಬೆಳಗಾವಿ
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿ ಮೊಬೈಲ್ ಬಳಕೆ ಮಾಡಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣದ ತನಿಖೆಯನ್ನು ಬೆಳಗಾವಿ ಪೊಲೀಸರು ತೀವ್ರಗೊಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಜೈಲಿನೊಳಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪೂರೈಕೆ ಮಾಡಿದ ಜಾಲದ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪ್ರಕರಣವನ್ನು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಜೈಲಿನಲ್ಲೇ ನಠೋರಿಯಸ್ ಕೈದಿ ಜಯೇಶ್ ಪೂಜಾರಿಯನ್ನು ಕೋರ್ಟ್ ಅನುಮತಿ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ತನಿಖಾಧಿಕಾರಿಗಳು ಕೇಳುತ್ತಿರುವ ಹಲವು ಪ್ರಶ್ನೆಗಳಿಗೆ ಕೈದಿ ಸಮರ್ಪಕ ಉತ್ತರ ನೀಡದೆ ಮೌನ ವಹಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡವು ಇನ್ನಷ್ಟು ಮಾಹಿತಿ ಕಲೆಹಾಕಲು ಮುಂದಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಿತ್ತು. ಆ ತನಿಖೆಯ ವೇಳೆ ಕೈದಿ ಜಯೇಶ್ ಪೂಜಾರಿ ಹಿಂಡಲಗಾ ಜೈಲಿನೊಳಗೇ ಇದ್ದುಕೊಂಡು 28 ಬಾರಿ ಮೊಬೈಲ್ ಬಳಕೆ ಮಾಡಿರುವುದು ಪತ್ತೆಯಾಗಿತ್ತು. ಜೈಲಿನ ಭದ್ರತಾ ವ್ಯವಸ್ಥೆಯ ನಡುವೆಯೂ ಮೊಬೈಲ್ ಬಳಕೆಯಾಗಿರುವುದು ತನಿಖಾ ಸಂಸ್ಥೆಗಳಿಗೂ ಆತಂಕ ಮೂಡಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಗಪುರ ನ್ಯಾಯಾಲಯ ಜಯೇಶ್ ಪೂಜಾರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಬಳಿಕ ಎನ್‌ಐಎ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಹಿಂಡಲಗಾ ಜೈಲು ಅಧಿಕಾರಿಗಳು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಇದೀಗ ಬೆಳಗಾವಿ ಪೊಲೀಸರು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
ಜೈಲಿನೊಳಗೆ ಮೊಬೈಲ್, ಸಿಮ್ ಕಾರ್ಡ್ ಹಾಗೂ ಇತರ ಸಂಪರ್ಕ ಸಾಧನಗಳನ್ನು ಯಾರು ಪೂರೈಸುತ್ತಿದ್ದರು?, ಜೈಲು ಸಿಬ್ಬಂದಿಗಳ ಪಾತ್ರ ಇದೆಯೇ?, ಹೊರಗಿನಿಂದ ಯಾವ ಜಾಲ ಕಾರ್ಯನಿರ್ವಹಿಸುತ್ತಿತ್ತು? ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಜೈಲಿನ ಕೆಲ ಸಿಬ್ಬಂದಿ ಹಾಗೂ ಕೈದಿಗಳ ಮಾಹಿತಿ ಸಂಗ್ರಹ ಕಾರ್ಯವೂ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
