Monday, November 23, 2026
HomeBelagaviನೀಲಣ್ಣವರ ವಂಚನೆ ಕೇಸ್: ಡಾಲಿ ಧನಂಜಯ ಸೇರಿ ಮೂವರು ನಟರಿಗೆ ಸಿಐಡಿ ತ‌ನಿಖೆ ಭೀತಿ

ನೀಲಣ್ಣವರ ವಂಚನೆ ಕೇಸ್: ಡಾಲಿ ಧನಂಜಯ ಸೇರಿ ಮೂವರು ನಟರಿಗೆ ಸಿಐಡಿ ತ‌ನಿಖೆ ಭೀತಿ

ಬೆಳಗಾವಿ
ಶಿವಂ ಅಸೋಸಿಯೇಟ್ಸ್ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ, ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆ ‌ಇದೆ.
ಸಿಐಡಿ ನೋಟಿಸ್ ಪಡೆದವರಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ, ವಶಿಷ್ಠ ಸಿಂಹ, ರಾಗಿಣಿ, ಸಪ್ತಮಿಗೌಡ ಸೇರಿದ್ದಾರೆ. ಕಳೆದ ಡಿಸೆಂಬರ್ 27ರಂದು ಬೆಳಗಾವಿಯಲ್ಲಿ ಭರ್ಜರಿಯಾಗಿ ನಡೆದಿದ್ದ “ಕನ್ನಡದ ಉತ್ಸವ” ಕಾರ್ಯಕ್ರಮ ಇದೀಗ ಸಿಐಡಿ ತನಿಖೆಯ ಕೇಂದ್ರಬಿಂದುವಾಗಿದೆ. ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು. ಸಾವಿರಾರು ಜನರ ಸಮ್ಮುಖದಲ್ಲಿ ನಡೆದಿದ್ದ ಈ ಉತ್ಸವಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.
ಪ್ರಕರಣದ ತನಿಖೆ ವೇಳೆ ಹೂಡಿಕೆದಾರರಿಂದ ಸಂಗ್ರಹಿಸಲಾಗಿದ್ದ ಠೇವಣಿ ಹಣವನ್ನೇ ಉತ್ಸವ ಆಯೋಜನೆಗೆ ಬಳಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ-ನಟಿಯರಿಂದ ಮಾಹಿತಿ ಪಡೆಯಲು ಸಿಐಡಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಶಿವಂ ಅಸೋಸಿಯೇಟ್ಸ್ ವಿರುದ್ಧ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದು, ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಸಾವಿರಾರು ಜನರು ಹಣ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಹಾಗೂ ಲಾಭದ ಆಮಿಷ ಒಡ್ಡಿ ಹಣ ಸಂಗ್ರಹಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ಈಗ ಚಿತ್ರರಂಗದ ತಾರೆಯರಿಗೂ ಸಿಐಡಿ ನೋಟಿಸ್ ಜಾರಿ ಆಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಟ-ನಟಿಯರು ವಿಚಾರಣೆಗೆ ಹಾಜರಾದ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

Total Views 186
RELATED ARTICLES

Most Popular

Recent Comments

KNN City News
Home
E-Paper