
ಬೆಳಗಾವಿ
ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದ ಗಣಿಗಾರಿಕೆ ಚಟುವಟಿಕೆ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಲ್ಯಾಟರೈಟ್ ಗಣಿಗಾರಿಕೆಗೆ ಅನುಮತಿ ಇದ್ದರೂ, ವಾಸ್ತವದಲ್ಲಿ ಯಾವ ಖನಿಜವನ್ನು ಹೊರತೆಗೆಯಲಾಗುತ್ತಿದೆ. ಆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಹಾಗೂ ಉಪನಿರ್ದೇಶಕ ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಹರೀಶ ಎಂಬ ವ್ಯಕ್ತಿ ಗಣಿಗಾರಿಕೆ ಮಾಡಲು ಅನುಮತಿ ಪಡೆದಿರುವುದು ಬೇರೆ ಕಡೆ ಆದರೆ ಹಬ್ಬಾನಟ್ಟಿ ಸರ್ವೆ ನಂಬರ್ 7ರಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಇದು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಲೀಸ್ ಮಂಜೂರಾದ ಜಾಗವೇ ಎಂಬುದರ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.
ಸಾಗಾಟವಾಗುತ್ತಿರುವ ಖನಿಜದ ಗುಣಮಟ್ಟವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಿಶೀಲಿಸಿದ್ದೆಯೇ ಎಂಬುದಕ್ಕೂ ಸ್ಪಷ್ಟನೆ ಇಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಯಲ್ಟಿ ಪಾವತಿ, ಸಾಗಣೆ ಪರವಾನಗಿ ಹಾಗೂ ಸಂಬಂಧಿತ ದಾಖಲೆಗಳ ಪರಿಶೀಲನೆ ನಡೆದಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಸ್ಥಳೀಯರು ಹಾಗೂ ಮಾಧ್ಯಮಗಳು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದರೂ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.


ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರ್‌ಟಿಒ ಇಲಾಖೆಗಳ ಪಾತ್ರದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಗುತ್ತಿಗೆದಾರರು, ಸಾಗಣೆದಾರರು ಹಾಗೂ ಸಂಬಂಧಿತ ತಂಡಗಳ ಚಟುವಟಿಕೆಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

“ಬೆಳಗಾವಿಯ ನೈಸರ್ಗಿಕ ಸಂಪತ್ತು ಜನರದ್ದು. ಎಲ್ಲವೂ ಕಾನೂನುಬದ್ಧವಾಗಿದ್ದರೆ ದಾಖಲೆಗಳನ್ನು ಸಾರ್ವಜನಿಕರ ಮುಂದಿಡಲಿ. ಅಕ್ರಮ ನಡೆದಿದ್ದರೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಲಿ” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

