ಹುಬ್ಬಳ್ಳಿ , ಜೂ.13: ವಿಕಾಸ್ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ರಾಷ್ಟ್ರೀಯ ಸಂಸ್ಥಾಪಕ ಹಾಗೂ ಬಿಹಾರದ ಮಾಜಿ ಸಚಿವ ಮುಕೇಶ್ ಸಹನಿ ಅವರ ಬಂಧನ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಕಮಲೇಶ್ ಬಿಂಡ್ ಎನ್ಕೌಂಟರ್ ಪ್ರಕರಣವನ್ನು ಖಂಡಿಸಿ ವಿಐಪಿ ಕರ್ನಾಟಕ ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಐಪಿ ಪಕ್ಷದ ರಾಷ್ಟ್ರೀಯ ಕೂಲಿ-ಬೆಸ್ತ-ನಿಷಾದ್ ಹಿಂದುಳಿದ ಮಠಾಧೀಶ್ವರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬ್ರಹ್ಮಶ್ರೀ ರಾಜು ಗುರುಸ್ವಾಮಿ, ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು.
ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದ್ದು, ಪಕ್ಷದ ರಾಷ್ಟ್ರೀಯ ನಾಯಕರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ ಅವರು, ಕಮಲೇಶ್ ಬಿಂಡ್ ಎನ್ಕೌಂಟರ್ ಪ್ರಕರಣದಲ್ಲಿಯೂ ನ್ಯಾಯಾಂಗ ಪ್ರಕ್ರಿಯೆ ಅನುಸರಿಸದೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೇ ಹೊರತು ನ್ಯಾಯಾಲಯದ ಮುಂದೆ ಹಾಜರುಪಡಿಸದೆ ಎನ್ಕೌಂಟರ್ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿರುವ ಸಂಜಯ್ ನಿಶಾದ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಸಮಾಜದ ಮೇಲಿನ ಅನ್ಯಾಯದ ಕುರಿತು ಮೌನ ವಹಿಸಿರುವ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೋಲಿ, ನಿಷಾದ್ ಸೇರಿದಂತೆ ವಿವಿಧ ಒಳಪಂಗಡಗಳ ಜನರಿಗೆ ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಬದಲಾಗಿ ಸಮುದಾಯದವರನ್ನು ಗುರಿಯಾಗಿಸಿ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ದೇಶಾದ್ಯಂತ ನಿಷಾದ್, ಕೋಲಿ ಸೇರಿದಂತೆ 39 ಒಳಪಂಗಡಗಳಿಗೆ ಸೇರಿದ ಕೋಟ್ಯಂತರ ಮತದಾರರಿದ್ದು, ಸಮುದಾಯವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಾಜದ ಮೇಲಿನ ದೌರ್ಜನ್ಯಗಳನ್ನು ತಕ್ಷಣ ನಿಲ್ಲಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
