ಹುಬ್ಬಳ್ಳಿ: ಸುಮಾರು 15 ವರ್ಷಗಳ ಬಳಿಕ ಸಾಹಸ ನಿರ್ದೇಶಕ ಡ್ರಿಲ್ಲರ್ ಮಂಜು ನಿರ್ದೇಶಿಸಿರುವ ‘ಡೆಡ್ಲಿ ಕಿಲ್ಲರ್’ ಚಿತ್ರ ಬಿಡುಗಡೆಯ ಹಂತ ತಲುಪಿದೆ. ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಟಿ. ತಂಬಳ್ಳಿಮಠ ನಿರ್ಮಿಸಿರುವ ಈ ಚಿತ್ರದಲ್ಲಿ ಸಂಭ್ರಮ ಖ್ಯಾತಿಯ ನಟ ಅಭಯವೀರ್ ಹಾಗೂ ನಟಿ ನಿರೀಕ್ಷಾ ನಾಯಕ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಡ್ರಿಲ್ಲರ್ ಮಂಜು, “ಡೆಡ್ಲಿ ಕಿಲ್ಲರ್ ಆಕ್ಷನ್, ಥ್ರಿಲ್ಲರ್ ಹಾಗೂ ಹಾರರ್ ಅಂಶಗಳನ್ನು ಒಳಗೊಂಡಿರುವ ವಿಭಿನ್ನ ಕಥಾಹಂದರದ ಸಿನಿಮಾ. ಆರು ಜನರ ಗ್ಯಾಂಗ್ ದಟ್ಟ ಕಾಡಿನಲ್ಲಿ ತಪ್ಪಿಸಿಕೊಂಡ ಬಳಿಕ ನಾಯಕ ಅವರನ್ನು ಹೇಗೆ ಪತ್ತೆಹಚ್ಚಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥೆ. ಅಭಯವೀರ್ ಉತ್ತಮ ಕಲಾವಿದರಾಗಿದ್ದು, ಭವಿಷ್ಯದಲ್ಲಿ ದೊಡ್ಡ ಮಟ್ಟದ ನಟನಾಗಿ ಬೆಳೆಯಲಿದ್ದಾರೆ. ನಾಯಕಿ ನಿರೀಕ್ಷಾ ಕೂಡ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ” ಎಂದು ಹೇಳಿದರು.
ನಾಯಕ ಅಭಯವೀರ್ ಮಾತನಾಡಿ, “ಇಡೀ ಸಿನಿಮಾದಲ್ಲಿ ಒಂದೇ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಕಾಡಿನಲ್ಲಿ ಚಿತ್ರೀಕರಣ ನಡೆಸಿದ ಅನುಭವ ವಿಶೇಷವಾಗಿತ್ತು. ಡ್ರಿಲ್ಲರ್ ಮಂಜು ಅವರು ನನ್ನ ಆರಂಭದ ದಿನಗಳಿಂದಲೇ ಮಾರ್ಗದರ್ಶಕರಾಗಿದ್ದಾರೆ” ಎಂದರು.
ನಟಿ ನಿರೀಕ್ಷಾ ಮಾತನಾಡಿ, “ಚಿತ್ರದಲ್ಲಿ ನಾನು ನಾಯಕನ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಎರಡು ವಿಭಿನ್ನ ಶೇಡ್‌ಗಳನ್ನು ಹೊಂದಿದೆ” ಎಂದು ತಿಳಿಸಿದರು.
ಚಿತ್ರದ ಮೂರು ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸಿದ್ದು, ಮಲ್ಲಿಕಾರ್ಜುನ್ ಛಾಯಾಗ್ರಹಣ ಹಾಗೂ ದೀಪು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಆರು ವಿಶಿಷ್ಟ ಸಾಹಸ ದೃಶ್ಯಗಳಿದ್ದು, ಅವುಗಳನ್ನು ಡ್ರಿಲ್ಲರ್ ಮಂಜು ಅವರೇ ಸಂಯೋಜಿಸಿದ್ದಾರೆ. ಲೋಕೇಂದ್ರ ಸೂರ್ಯ, ಡ್ರಿಲ್ಲರ್ ಮಂಜು ಹಾಗೂ ಸುನಿಲ್ ಬಾಲ್ಟರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿರುವ ‘ಡೆಡ್ಲಿ ಕಿಲ್ಲರ್’ ಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ.
