Monday, November 23, 2026
HomeBelagaviಇತಿಹಾಸದ ಪುಟ ಸೇರಲಿದ್ದಾರೆ ಬೆಳಗಾವಿಯ ಪ್ರಭು ಯತ್ನಟ್ಟಿ

ಇತಿಹಾಸದ ಪುಟ ಸೇರಲಿದ್ದಾರೆ ಬೆಳಗಾವಿಯ ಪ್ರಭು ಯತ್ನಟ್ಟಿ

 

ಬೆಳಗಾವಿ
ಬೆಳಗಾವಿಯ ನಿರ್ಮಾಪಕ ಪ್ರಭು ಯಡ್ನಟ್ಟಿ ಅವರ ನಿರ್ಮಾಣದ ಬಹುನಿರೀಕ್ಷಿತ ‘ಮಹಾಕವಿ’ ಚಿತ್ರ ಕನ್ನಡ ಸಾಹಿತ್ಯದ ಶ್ರೇಷ್ಠ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಿಲ್ಲೆಯ ಹೆಮ್ಮೆಯ ಕ್ಷಣಕ್ಕೆ ಕಾರಣವಾಗಿದೆ.
ಪಿ.ಆರ್. ಅಸೋಸಿಯೇಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗ, ಸಾಹಿತ್ಯ ಹಾಗೂ ಸಾಮಾಜಿಕ ಕಾಳಜಿಯ ಕಥೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿರುವ ಬರಗೂರು ರಾಮಚಂದ್ರಪ್ಪ ಅವರ ವೃತ್ತಿಜೀವನದ 25ನೇ ಚಿತ್ರ ಎಂಬ ವಿಶೇಷತೆಯನ್ನೂ ಮಹಾಕವಿ ಹೊಂದಿದೆ.
ಕನ್ನಡದ ಆದಿಕವಿ ಪಂಪ ಅವರ ಜೀವನ, ಸಾಹಿತ್ಯ ಚಿಂತನೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣಗೊಂಡಿದೆ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಹೊತ್ತ ಕನ್ನಡ ಸಾಹಿತ್ಯದ ಶಾಶ್ವತ ಮೌಲ್ಯಗಳನ್ನು ಇಂದಿನ ಯುವಜನತೆಗೆ ಪರಿಚಯಿಸುವ ಉದ್ದೇಶವನ್ನು ಚಿತ್ರ ಹೊಂದಿದೆ.
2026ರ ಜನವರಿಯಲ್ಲಿ ನಡೆದ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಹಾಕವಿ ಪ್ರದರ್ಶನಗೊಂಡಿದ್ದು, ಚಿತ್ರರಂಗದ ಗಣ್ಯರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಆದಿಕವಿ ಪಂಪರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತಂದಿರುವ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದೀಗ ಈ ಚಿತ್ರ ಅಮೆರಿಕದ ಹಾಲಿವುಡ್ ಇಂಟರ್‌ನ್ಯಾಷನಲ್ ಗೋಲ್ಡನ್ ಏಜ್ ಫೆಸ್ಟಿವಲ್ನಲ್ಲಿ ಸೆಮಿ-ಫೈನಲಿಸ್ಟ್ ಆಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಈ ಗೌರವ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ, ಬೆಳಗಾವಿಯಿಂದ ಹೊರಹೊಮ್ಮಿದ ಸಾಂಸ್ಕೃತಿಕ ಕೊಡುಗೆಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಂತಾಗಿದೆ.
ಖ್ಯಾತ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅನುಭವಿ ತಾಂತ್ರಿಕ ಹಾಗೂ ಸೃಜನಾತ್ಮಕ ತಂಡ ಚಿತ್ರದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಐತಿಹಾಸಿಕ ಕಥೆಯನ್ನು ಮಾತ್ರವಲ್ಲದೆ, ಕರ್ನಾಟಕದ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ವೈಭವವನ್ನು ವಿಶ್ವದ ಪ್ರೇಕ್ಷಕರಿಗೆ ಪರಿಚಯಿಸುವ ಅರ್ಥಪೂರ್ಣ ಚಿತ್ರವಾಗಿ ಮಹಾಕವಿ ಮೂಡಿಬಂದಿದೆ. ಪ್ರಾದೇಶಿಕ ಸಾಹಿತ್ಯಕ್ಕೆ ಜಾಗತಿಕ ವೇದಿಕೆಯಲ್ಲಿ ಹೆಚ್ಚಿನ ಗುರುತಿನ ಅಗತ್ಯವಿರುವ ಈ ಸಂದರ್ಭದಲ್ಲಿ, ಬೆಳಗಾವಿಯ ನಿರ್ಮಾಪಕರ ಈ ಮಹತ್ವಾಕಾಂಕ್ಷೆಯ ಪ್ರಯತ್ನ ಕನ್ನಡದ ಸಾಹಿತ್ಯ ಪರಂಪರೆಯನ್ನು ವಿಶ್ವದಾದ್ಯಂತ ಸಾರುವ ಹೆಮ್ಮೆಯ ಸಾಂಸ್ಕೃತಿಕ ಯೋಜನೆಯಾಗಿದೆ.

Total Views 127
RELATED ARTICLES

Most Popular

Recent Comments

KNN City News
Home
E-Paper