
ಬೆಳಗಾವಿ
ಹೊಲದಲ್ಲಿ ಬೆಳೆದಿದ್ದ ಕಾಡು ಅಣಬೆ (ಮಶ್ರೂಮ್) ಸೇವಿಸಿದ ಪರಿಣಾಮ ಒಂದೇ ಕುಟುಂಬದ 9 ಮಂದಿ ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ಹೊಲದಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತಂದು ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದರು. ಇದನ್ನು ಗಮನಿಸಿದ ಮತ್ತೊಂದು ಕುಟುಂಬವೂ ಅದೇ ಹೊಲದಿಂದ ಅಣಬೆ ತಂದು ಅಡುಗೆ ಮಾಡಿಕೊಂಡು ಸೇವಿಸಿದೆ.
ಆದರೆ, ಅಣಬೆ ಕಿತ್ತು ತಂದಿದ್ದ ಹೊಲದಲ್ಲಿ ಈ ಹಿಂದೆ ಬೆಳೆಗಳಿಗೆ ಕೀಟನಾಶಕ ಔಷಧಿ ಸಿಂಪಡಿಸಲಾಗಿತ್ತು. ಈ ವಿಷಯ ತಿಳಿಯದೇ ಅಣಬೆ ಸೇವಿಸಿದ ಕೆಲವೇ ಹೊತ್ತಿನಲ್ಲಿ ಕುಟುಂಬದ ಸದಸ್ಯರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ತಕ್ಷಣವೇ ಸ್ಥಳೀಯರು ಎಲ್ಲರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಓರ್ವ ಗರ್ಭಿಣಿ ಮಹಿಳೆಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಕಾಡು ಅಣಬೆಗಳನ್ನು ಗುರುತಿಸದೇ ಸೇವಿಸದಂತೆ ಎಚ್ಚರಿಕೆ ನೀಡಿದೆ.
