Monday, November 23, 2026
HomeBelagaviಬೆಳಗಾವಿಯಲ್ಲಿ ಕ್ಲಬ್‌, ಜಿಮಖಾನಾಗಳ ಖಾಕಿ ಕಣ್ಗಾವಲು

ಬೆಳಗಾವಿಯಲ್ಲಿ ಕ್ಲಬ್‌, ಜಿಮಖಾನಾಗಳ ಖಾಕಿ ಕಣ್ಗಾವಲು

 

ಬೆಳಗಾವಿ
ಇತ್ತೀಚೆಗೆ ನಗರದಲ್ಲಿ ನಡೆದ ಕೆಲ ಘಟನೆಗಳ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಇಲಾಖೆ ಕ್ಲಬ್‌ಗಳು, ಜಿಮಖಾನಾಗಳು ಹಾಗೂ ಇತರೆ ಮನರಂಜನಾ ಕೇಂದ್ರಗಳ ಕಾರ್ಯಾಚರಣೆಯ ಮೇಲೆ ವಿಶೇಷ ನಿಗಾ ವಹಿಸಿದೆ. ನಗರ ವ್ಯಾಪ್ತಿಯಲ್ಲಿರುವ ಎಲ್ಲ ಕ್ಲಬ್‌ಗಳ ಸಮಗ್ರ ಪರಿಶೀಲನೆ ನಡೆಸುವಂತೆ ಎಲ್ಲಾ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಸೂಚನೆ ನೀಡಲಾಗಿದೆ.
ಹೌದು. ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಕ್ಲಬ್‌ಗಳು ಮತ್ತು ಮನರಂಜನಾ ಕೇಂದ್ರಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳು ಕಾನೂನುಬದ್ಧ ಪರವಾನಗಿ ಹಾಗೂ ಅಗತ್ಯ ಅನುಮತಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಾರ್ಡ್ ಗೇಮ್ಸ್‌ ಸೇರಿದಂತೆ ಯಾವುದೇ ಆಟಗಳು ನಡೆಯುವ ಸ್ಥಳಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನಗಳು ಹಾಗೂ ಅನ್ವಯಿಸುವ ಕಾನೂನುಗಳಡಿ ಪಾಲಿಸಬೇಕಾದ ಷರತ್ತುಗಳನ್ನು ಲಿಖಿತ ರೂಪದಲ್ಲಿ ಕ್ಲಬ್‌ಗಳ ಆಡಳಿತ ಮಂಡಳಿಗೆ ನೀಡಲಾಗುತ್ತಿದ್ದು, ಅದರ ಸ್ವೀಕೃತಿಯನ್ನೂ ಪಡೆಯಲಾಗುತ್ತಿದೆ.
ಪೊಲೀಸ್ ಇಲಾಖೆ ವಿಧಿಸಿರುವ ಪ್ರಮುಖ ಷರತ್ತುಗಳಲ್ಲಿ ಪ್ರವೇಶ ದ್ವಾರ ಹಾಗೂ ಆಟ ನಡೆಯುವ ಸ್ಥಳಗಳಲ್ಲಿ ಕಡ್ಡಾಯ ಸಿಸಿಟಿವಿ ಅಳವಡಿಕೆ, ಕನಿಷ್ಠ 15 ದಿನಗಳ ದೃಶ್ಯಾವಳಿ ಸಂರಕ್ಷಣೆ, ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಸದಸ್ಯರಲ್ಲದವರಿಗೆ ಆಟಗಳಲ್ಲಿ ಅವಕಾಶ ನಿರಾಕರಣೆ, ಹಣದ ಪಣ, ಬೆಟ್ಟಿಂಗ್ ಹಾಗೂ ಜೂಜಾಟಕ್ಕೆ ಸಂಪೂರ್ಣ ನಿಷೇಧ ಮತ್ತು ಪೊಲೀಸ್ ಪರಿಶೀಲನೆಗೆ ಸಂಪೂರ್ಣ ಸಹಕಾರ ನೀಡುವುದು ಸೇರಿವೆ.
ಎಲ್ಲ ಪೊಲೀಸ್ ಠಾಣೆಗಳು 10 ದಿನಗಳೊಳಗೆ ಪರಿಶೀಲನಾ ವರದಿಯನ್ನು ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಸಲಿವೆ. ಪರಿಶೀಲನೆ ವೇಳೆ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಸಂಬಂಧಿತ ಪರವಾನಗಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಕ್ಲಬ್‌ಗಳು ಹಾಗೂ ಮನರಂಜನಾ ಕೇಂದ್ರಗಳಿಗೆ ಯಾವುದೇ ತೊಂದರೆ ಉಂಟುಮಾಡುವುದು ಈ ಅಭಿಯಾನದ ಉದ್ದೇಶವಲ್ಲ. ಕಾನೂನುಬಾಹಿರ ಜೂಜಾಟ, ಬೆಟ್ಟಿಂಗ್ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವಿಶೇಷ ಪರಿಶೀಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Total Views 11
RELATED ARTICLES

Most Popular

Recent Comments

KNN City News
Home
E-Paper