
ಖಾನಾಪುರ
ಖಾನಾಪುರ ತಾಲೂಕಿನ ನಾಗುರ್ಡಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಟಗಾಳಿ ಗ್ರಾಮದ ಶ್ರೀ ಲಕ್ಷ್ಮಿ ಮಂದಿರದಲ್ಲಿ ಖಾನಾಪೂರ ಮತಕ್ಷೇತ್ರದ ಶಾಸಕರಾದ ವಿಠ್ಠಲ ಹಲಗೇಕರ ಅಧ್ಯಕ್ಷತೆಯಲ್ಲಿ ‘ಜನ ಸಂಪರ್ಕ ಸಭೆ’ ಯಶಸ್ವಿಯಾಗಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿಠ್ಠಲ ಹಲಗೇಕರ, “ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಬಿಜಿ ರಾಮ್ ಜಿ’ ಯೋಜನೆಯ ಸದುಪಯೋಗವನ್ನು ಪ್ರತಿಯೊಂದು ಗ್ರಾಮೀಣ ಕುಟುಂಬವೂ ಪಡೆದುಕೊಳ್ಳಬೇಕು. ‘ವಿಕಸಿತ ಭಾರತ 2047’ರ ಗುರಿ ತಲುಪಲು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಆಸ್ತಿಗಳ ಸೃಜನೆಗಾಗಿ ಯೋಜನೆಯಡಿ ಜನರಿಗೆ ವರ್ಷದಲ್ಲಿ 125 ದಿನಗಳ ಉದ್ಯೋಗ ಒದಗಿಸಲಾಗುತ್ತಿದೆ. ನರೇಗಾ ಕೂಲಿಗಿಂತ 12 ರೂ. ಹೆಚ್ಚಾಗಿ ಅಂದರೆ ಪ್ರತಿ ದಿನಕ್ಕೆ 382 ರೂ. ಕೂಲಿ ನೀಡಲಾಗುತ್ತಿದ್ದು, ಇದರಿಂದ ವಾರ್ಷಿಕವಾಗಿ 47,750 ರೂ. ಗಳಷ್ಟು ಆರ್ಥಿಕ ನೆರವು ಪ್ರತಿ ಕುಟುಂಬಕ್ಕೆ ಸಿಗಲಿದೆ” ಎಂದು ವಿವರಿಸಿದರು.
ಇದೇ ವೇಳೆ, ವಿಬಿಜಿ ರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕರಾದ ಶಶಿಧರ ಬಳ್ಳಾರಿ ಅವರು ಭಾಗವಹಿಸಿ, ಯೋಜನೆಯ ರೂಪುರೇಷೆಗಳು, ಅರ್ಹತೆಗಳು ಹಾಗೂ ನೋಂದಣಿ ಪ್ರಕ್ರಿಯೆಯ ಕುರಿತು ವಿವರಣೆ ನೀಡಿದರು. “ಯೋಜನೆಯ ಯಶಸ್ವಿ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಜನರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಂಡು ಸಹಕಾರ ನೀಡಬೇಕು” ಎಂದು ಕೋರಿದ ಅವರು, ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಸುದೀರ್ಘ 19 ವರ್ಷಗಳ ನಂತರ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಜರುಗುತ್ತಿರುವುದರಿಂದ ಹೈವೇಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ, ಕುಡಿಯುವ ನೀರಿಗಾಗಿ ಬೋರ್ವೆಲ್, ಅಂಗನವಾಡಿ ಕಟ್ಟಡ, ಚರಂಡಿ, ಶಾಲಾ ಆಟದ ಮೈದಾನ ಹಾಗೂ ನೀರಿನ ಟ್ಯಾಂಕರ್ ಸೌಲಭ್ಯ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಮನವಿ ಪರಿಶೀಲಿಸಿ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಅವರು, “ಗ್ರಾಮಸ್ಥರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಎರಡು ಬೋರ್ವೆಲ್ಗಳಿಗೆ ಮಂಜೂರಾತಿ ಸಿಕ್ಕಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಗ್ರಾಮದ ರಸ್ತೆಗಳು, ಚರಂಡಿ ಹಾಗೂ ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿಬಿಜಿ ಯೋಜನೆ ಅಡಿಯಲ್ಲಿ ಬರುವ ಕಾಮಗಾರಿಗಳನ್ನು 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಅನುಷ್ಠಾನಗೊಳಿಸಲಾಗುವುದು” ಎಂದರು.
ನಂತರ ಮಾತನಾಡಿದ ಶಾಸಕರು, ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಆದ್ಯತೆಯ ಮೇರೆಗೆ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಇತರ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಲಾಗುವುದು ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಪಿ.ಆರ್.ಇ.ಡಿ ಎಇಇ ರಾಜೇಂದ್ರ ಜಾಧವ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣಕುಮಾರ ಉಪ್ಪಾಳೆ, ಸಹಾಯಕ ಕೃಷಿ ನಿರ್ದೇಶಕ ದಾಮು ಚವ್ಹಾನ, ಪಶುಸಂಗೋಪನೆ ಇಲಾಖೆ ಅಧಿಕಾರಿ ಮನೋಹರ ದಾದಮಿ, ಸಿ.ಡಿ.ಪಿ.ಓ ವಿಕ್ರಮ ಕೆ.ಬಿ., ಬಿ.ಇ.ಓ ಮಂಜುನಾಥ ಹಟ್ಟಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಾಯನಾಕ, ಐ.ಇ.ಸಿ ಸಂಯೋಜಕ ಪ್ರಮೋದ ಗೋಡೆಕರ, ತಾಂತ್ರಿಕ ಸಹಾಯಕಿ ಕಾಂಚನ ಪಟೇಕರ, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಕಾಟಗಾಳಿ ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
