Monday, November 23, 2026
HomeBelagaviನೀಲಣ್ಣವರ ಮೇಲೆ ಇಡಿ ದಾಳಿ: ಇನ್ನೂ ಪತ್ತೆಯಾಗದ 1,777 ಕೋಟಿ‌ ಹಣ

ನೀಲಣ್ಣವರ ಮೇಲೆ ಇಡಿ ದಾಳಿ: ಇನ್ನೂ ಪತ್ತೆಯಾಗದ 1,777 ಕೋಟಿ‌ ಹಣ

ಬೆಳಗಾವಿ
ಠೇವಣಿದಾರರಿಗೆ ಹೆಚ್ಚಿನ ಬಡ್ಡಿ‌ ನೀಡುವ ಆಮಿಷ್ಯ ನೀಡಿ ಸಾವಿರಾರು ಕೋಟಿ ವಂಚನೆಯ ಆರೋಪ ಎದುರಿಸುತ್ತಿರುವ ಶಿವ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ‌ನೀಲಣ್ಣವರ ಮೇಲೆ ಇಡಿ ದಾಳಿ ಮಾಡಿದ ಬಳಿ ಪ್ರಕಟಣೆ ಹೊರಡಿಸಿದ್ದು, ದಾಳಿಯಲ್ಲಿ 2,110 ಕೋಟಿ ರೂ. ಸಂಗ್ರಹವಾಗಿದ್ದು, 1,777 ಕೋಟಿ ರೂ. ಹಣದ ಜಾಡು ಪತ್ತೆಯಾಗಿಲ್ಲ.
ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಪ್ರದೇಶಗಳ ವಿವಿಧ ಸ್ಥಳಗಳ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಮಂಗಳೂರು ಮೂಲದ ಇಡಿ ಅಧಿಕಾರಿಗಳ ತಂಡ ಆ.7ರಂದು ವಿವಿಧೆಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಂಡಿದೆ. ಕಾರ್ಯಾಚರಣೆ ವೇಳೆ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಬಡ್ಸ್ ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾದ ಎಫ್‌ಐಆರ್‌ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಕೈಗೊಂಡಿದೆ.
2,110.97 ಕೋಟಿ ಸಂಗ್ರಹ ತನಿಖೆಯ ಪ್ರಾಥಮಿಕ ಮಾಹಿತಿಯಂತೆ ಶಿವಂ ಅಸೋಸಿಯೇಟ್ಸ್‌ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ.
ಶಿವಾನಂದ ನೀಲಣ್ಣವರ ಹೂಡಿಕೆದಾರರಿಗೆ ತಿಂಗಳಿಗೆ ಶೇ.3ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿ ಸುಮಾರು 2,110.97 ಕೋಟಿ ಹಣ ಸಂಗ್ರಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪೈಕಿ ಸುಮಾರು 333.89 ಕೋಟಿ ಹೂಡಿಕೆದಾರರಿಗೆ ಮರುಪಾವತಿಸಿರುವುದು ಪತ್ತೆಯಾಗಿದೆ.
ಇನ್ನುಳಿದ 1,777.08 ಕೋಟಿ ಮೊತ್ತದ ಅಪರಾಧದ ಆದಾಯದ ಹಣದ ಜಾಡು ಪತ್ತೆಯಾಗಿಲ್ಲ ಎಂದು ಇಡಿ ತಿಳಿಸಿದೆ.
ಏಜೆಂಟ್‌ಗಳಿಗೆ ಶೇ.0.5 ಕಮಿಷನ್‌ ಸಾರ್ವಜನಿಕರನ್ನು ಹೂಡಿಕೆ ಮಾಡಲು ಪ್ರೇರೇಪಿಸುವ ಕಮಿಷನ್‌ ಏಜೆಂಟ್‌ಗಳು ಹಾಗೂ ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್‌ ನೀಡಲಾಗುತ್ತಿತ್ತು ಎಂಬ ಅಂಶವೂ ತನಿಖೆಯಲ್ಲಿ ಬಹಿರಂಗವಾಗಿದೆ.
ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನು ವಿವಿಧ ವ್ಯವಹಾರ, ವೈಯಕ್ತಿಕ ಹಾಗೂ ಮಧ್ಯವರ್ತಿ ಬ್ಯಾಂಕ್‌ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಷೇರು ದಲ್ಲಾಳಿಗಳು, ಫಿಕ್ಸೆಡ್‌ ಡೆಪಾಸಿಟ್‌ ಖಾತೆಗಳು, ಸಂಬಂಧಿಕರು ಹಾಗೂ ಇತರ ಫಲಾನುಭವಿಗಳ ಖಾತೆಗಳಿಗೂ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಹಲವು ಸಂಸ್ಥೆಗಳ ನಡುವೆ ಹಣಕಾಸು ಜಾಲ
ಶಿವಂ ಅಸೋಸಿಯೇಟ್ಸ್‌, ಶಿವಾನಂದ ನೀಲಣ್ಣವರ, ಸುಭಾಷ್‌ ರಾಮಗೌಡ ನಂದರ್ಗಿ, ಮಹೇಶ್‌ ಎಸ್‌. ನೀಲಣ್ಣವರ, ಶಿವಂ ಪ್ರೊಡಕ್ಷನ್ಸ್‌, ಶಿವಂ ಲೈಫ್‌ಲೈನ್‌ ಪ್ರೈವೇಟ್‌ ಲಿಮಿಟೆಡ್‌, ಶಿವಂ ಸೇವಾ (ಒಪಿಸಿ) ಪ್ರೈವೇಟ್‌ ಲಿಮಿಟೆಡ್‌ ಸೇರಿದಂತೆ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ನಡುವೆ ಹಣಕಾಸಿನ ಸಂಪರ್ಕವಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಬ್ಯಾಂಕ್‌ ಖಾತೆಗಳು ಹಾಗೂ ಹಣಕಾಸು ದಾಖಲೆಗಳ ವಿಶ್ಲೇಷಣೆಯಲ್ಲಿ ಪರಸ್ಪರ ಸಂಪರ್ಕ ಹೊಂದಿದ ರೀತಿಯಲ್ಲಿ ಭಾರಿ ಪ್ರಮಾಣದ ಹಣದ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.
ದಾಖಲೆ, ಡಿಜಿಟಲ್‌ ಸಾಕ್ಷ್ಯ ವಶ
ಶೋಧ ಕಾರ್ಯಾಚರಣೆ ವೇಳೆ ಅಪರಾಧದ ಹಣದ ಸೃಷ್ಟಿ, ವರ್ಗಾವಣೆ, ಹಣವನ್ನು ವಿವಿಧ ಹಂತಗಳಲ್ಲಿ ಮರೆಮಾಡುವುದು ಹಾಗೂ ಬೇರೆಡೆ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್‌ ಸಾಕ್ಷ್ಯಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹಣಕಾಸು ವಹಿವಾಟು, ಹಣದ ಬೇರೆಡೆ ವರ್ಗಾವಣೆ, ಸ್ಥಿರಾಸ್ತಿಗಳಲ್ಲಿ ಹೂಡಿಕೆ ಹಾಗೂ ಆರೋಪಿಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗಿನ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳೂ ದೊರೆತಿವೆ. ವಶಪಡಿಸಿಕೊಂಡ ದಾಖಲೆಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದೆ ಎಂದು ಇಡಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views 109
RELATED ARTICLES

Most Popular

Recent Comments

KNN City News
Home
E-Paper