Monday, November 23, 2026
HomeBelagaviಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗೊತ್ತುವಳಿಗೆ ಪಾಲಿಕೆ ಹಿಂದೆಟ್ಟು

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗೊತ್ತುವಳಿಗೆ ಪಾಲಿಕೆ ಹಿಂದೆಟ್ಟು

ಬೆಳಗಾವಿ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮಂಗಳವಾರ ಪಟ್ಟು ಹಿಡಿದ ಪರಿಣಾಮ ಪಾಲಿಕೆ ಸಭೆಯಲ್ಲಿ ಕೆಲಕಾಲ ತೀವ್ರ ಗದ್ದಲ ಉಂಟಾಯಿತು.
ಪಾಲಿಕೆ ಸಭೆ ಆರಂಭವಾಗುತ್ತಿದ್ದಂತೆ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಸರ್ಕಾರದ ಸೂಚನೆ ಬರುವವರೆಗೆ ಕಾಯುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಚಾರದಲ್ಲಿ ಪಾಲಿಕೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಎಂಇಎಸ್ ಸದಸ್ಯರು ಗೊತ್ತುವಳಿ ಸ್ವೀಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಪರ-ವಿರೋಧದ ವಾಗ್ವಾದ ನಡೆಯಿತು. ಕರ್ನಾಟಕ ಪರ ಗೊತ್ತುವಳಿ ವಿಚಾರದಲ್ಲಿ ಬಿಜೆಪಿ ಸದಸ್ಯರು ಮೌನ ವಹಿಸಿರುವುದಕ್ಕೂ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಗೊತ್ತುವಳಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮೇಯರ್ ಹನುಮಂತ ಕೊಂಗಾಲಿ ಸಭೆಗೆ ತಿಳಿಸಿದರು.
ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, “ಸರ್ಕಾರದ ಸೂಚನೆಗಾಗಿ ಕಾಯಬೇಡಿ. ನಾವು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಆದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಇಂದೇ ಸ್ವೀಕರಿಸಬೇಕು” ಎಂದು ಪಟ್ಟು ಹಿಡಿದರು.
ಈ ಮಧ್ಯೆ ಮೇಯರ್ ಪ್ರೀತಿ ಕಾಮಕರ ಅವರು, ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದ ಅಧೀನದಲ್ಲಿದೆ. ಪಾಲಿಕೆಯು ನಾಡು-ನುಡಿಗೆ ಸದಾ ಬದ್ಧವಾಗಿದೆ ಎಂದು ರೂಲಿಂಗ್ ನೀಡಿದರು. ಆದರೆ, ಮೇಯರ್ ಅವರ ರೂಲಿಂಗ್‌ಗೂ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸದಸ್ಯರ ನಡುವೆ ಮಾತಿನ ಚಕಮಕಿ ಹಾಗೂ ಸದ್ದುಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಮೇಯರ್ ಪ್ರೀತಿ ಕಾಮಕರ ಸಭೆಯನ್ನು ಮುಂದೂಡಿದರು. ಬಳಿಕ ಅವರು ಸಭೆಯಿಂದ ಹೊರನಡೆದರು.

Total Views 99
RELATED ARTICLES

Most Popular

Recent Comments

KNN City News
Home
E-Paper