
ಬೆಳಗಾವಿ
ಖಾನಾಪುರ ಅರಣ್ಯ ಉಪವಿಭಾಗದಲ್ಲಿ ಸಂಚರಿಸುತ್ತಿರುವ ಆನೆ ಹಿಂಡು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯಾಧಿಕಾರಿಗಳು ವಾರದಿಂದ ಇಡೀ ರಾತ್ರಿ ಕೂಬಿಂಗ್ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ಬೀಡುಬಿಟ್ಟಿರುವ ಆನೆಗಳ ಹಿಂಡಿನಲ್ಲಿ ಸುಮಾರು 9 ಆನೆಗಳು ಗೋಚರಿಸಿವೆ.
ಬುಧವಾರ ತಡರಾತ್ರಿ ಖಾನಾಪುರ ಎಸಿಎಫ್ ಬಸವರಾಜ ವಾಳದ ಹಾಗೂ ವಲಯ ಅರಣ್ಯಾಧಿಕಾರಿ ಸಯ್ಯದಸಾಬ್ ನದಾಫ್ ಅವರ ನೇತೃತ್ವದಲ್ಲಿ ಇಡೀ ರಾತ್ರಿ ಕೂಬಿಂಗ್ ನಡೆಸಿ ಆನೆಗಳ ಹಿಂಡು ಭೀಮಗಡ ವನ್ಯಜೀವಿ ವಲಯದ ಪಾಲಿ ಗ್ರಾಮದ ಭತ್ತದ ಗದ್ದೆಗಳಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಖಾನಾಪುರ ಉಪ ವಿಭಾಗದ ಪಾಲಿ, ಹೆಮ್ಮಡಗಾ, ಅಬನಾಳಿ, ಡೊಂಗರಗಾವ, ಶಿರೋಳಿವಾಡಾ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದು, ಒಂಟಿಸಲಗ, ಎರಡು ಪುಟ್ಟ ಮರಿಗಳು, ನಾಲ್ಕು ಆನೆಗಳಿದ್ದು, ಪಾಲಿ ಗ್ರಾಮದ ಬಳಿ 7ಆನೆಗಳು ಬುಧವಾರ ರಾತ್ರಿ ಗೋಚರಿಸಿದವು.
ಪಟಾಕಿ ಸಿಡಿಸಿ, ಮದ್ದು ಸಿಡಿಸಿ ಬೆನ್ನತ್ತಿದ ಅಧಿಕಾರಿಗಳಿಗೆ ಆನೆಗಳು ಅತ್ತಿಂದಿತ್ತ ಸಂಚರಿಸಿ ಕಾಡಿಗೆ ಮರಳದೇ ಭತ್ತದ ಗದ್ದೆಗಳ ಅಂಚಿನಲ್ಲಿ ಓಡಾಡಿ ತಲೆ ನೋವು ಸೃಷ್ಟಿಸಿವೆ. ಆನೆಗಳ ಚಲನವಲನ ಹಾಗೂ ಅವುಗಳನ್ನು ಓಡಿಸುವಲ್ಲಿ ಸ್ಥಳೀಯ ಗ್ರಾಮಸ್ಥರ ನೆರವು ಪಡೆದರು.
ಭೀಮಗಡ ವನ್ಯಜೀವಿ ಅರಣ್ಯಧಾಮದ ಪಾಲಿ ಗ್ರಾಮದ ಬಳಿ ಕಾಡುರಸ್ತೆಯಂಚಿನಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ನೋಡಿ ಬೈಕ್ ಸವಾರರು ಹೆದರಿ ಓಡಿದ್ದು, ಅರಣ್ಯ ಸಿಬ್ಬಂಧಿ ಸ್ಥಳಕ್ಕೆ ತಲುಪುವುದರಲ್ಲೇ ಹಿಂಡು ಮಾಯವಾಗಿತ್ತು.
ಬೆಳಗಾವಿ ಅರಣ್ಯ ವಿಭಾಗದಲ್ಲಿ ಆನೆಗಳ ಹಿಂಡಿನ ಸಂಚಾರ ಇದೇ ಮೊದಲು ಪ್ರತ್ತಕ್ಷವಾಗುತ್ತಿದ್ದು, ದ್ರೋಣಗಳ ಮೂಲಕ ಹಾಗೂ ಅರಣ್ಯ ಸಿಬ್ಬಂಧಿ ನಿಯೋಜಿಸಿ ಕಣ್ಗಾವಲು ಇಡಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಾಳದ ತಿಳಿಸಿದ್ದಾರೆ.
ಭತ್ತದ ಗದ್ದೆಗಳಲ್ಲಿ ಓಡಾಡಿ ಬೆಳೆ ಹಾನಿ ಮಾಡುತ್ತಿರುವ ಆನೆಗಳನ್ನು ಮರಳಿ ಓಡಿಸುವುದು ಅರಣ್ಯಾಧಿಕಾರಿಗಳಿಗೆ ತಲೆನೋವಾಗಿದ್ದು, ಬೆಳೆ ಹಾನಿಯಾದ ಹೊಲಗಳ ರೈತರ ಮಾಹಿತಿ ಕಲೆಹಾಕಿದರು.
ಹಳಿಯಾಳ, ಕ್ಯಾಸಲರಾಕ್, ಜಗಳಪೇಟ್, ತಿನೈಘಾಟ್, ಗಣೇಶಗುಡಿ ಅರಣ್ಯ ಪ್ರದೇಶಗಳಿಂದ ಆನೆ ಹಿಂಡು ಆಹಾರ ಅರಸಿ ಇತ್ತ ಬಂದಿರುವ ಸಾಧ್ಯತೆ ಇದೆ. ಒಂಟಿಸಲಗ ಜೊತೆಗೆ ಮರಿ ಆನೆಗಳು ಜೊತೆಗೆ ಇರುವುದರಿಂದ ಈ ಹಿಂಡು ಭಯಾನಕವಾಗಿರುತ್ತದೆ. ಅರಣ್ಯಾಧಿಕಾರಿಗಳ ಗಮನಕ್ಕೆ ತಾರದೇ ಸಾರ್ವಜನಿಕರು ಕೂಗಾಟ ಮಾಡುವುದು, ಹತ್ತಿರ ಹೋಗುವುದು, ಪಟಾಕಿ ಸಿಡಿಸುವ ಇತರ ಯಾವುದೇ ಸಾಹಸ ಮಾಡಬಾರದು,
ಬೆಳೆ ಹಾನಿ ಪರಿಹಾರ ಅರಣ್ಯ ಇಲಾಖೆಯಿಂದ ಕೊಡಿಸಲಾಗುವುದು ಆನೆಗಳ ಹಿಂಡನ್ನು ಯಶಸ್ವಿಯಾಗಿ ಕಾಡಿಗೆ ಮರಳಿಸಲು ಪ್ರಯತ್ನ ನಡೆದಿದೆ. ಗ್ರಾಮಸ್ಥರು ಆನೆಯ ಬಳಿ ಹೋಗದಂತೆ ಡಿಸಿಎಫ್ ಎನ್. ಇ. ಕ್ರಾಂತಿ ಕನ್ನಡಮ್ಮಕ್ಕೆ ತಿಳಿಸಿದ್ದಾರೆ.
