ಲವ್ ಟುವರ್ಡ್ಸ್ ಫ್ಯಾಮಿಲಿ’ಯಿಂದ ಬಂತು ‘ಹೇ ನವಿಲೆ’ ಹಾಡು
ಹುಬ್ಬಳ್ಳಿ ಸೆ.21; ಈಗಾಗಲೇ ‘ಕುಂದಾಪುರದ ಹೆಣ್ಣಿವಳು’ ಹಾಡಿನ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ‘ಲವ್ ಟುವರ್ಡ್ಸ್ ಫ್ಯಾಮಿಲಿ’ ಸಿನಿಮಾದ ಎರಡನೇ ಗೀತೆ ‘ಹೇ ನವಿಲೆ’ ನಿನ್ನೆ (ಸೆ. 21) ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಆಗಿದೆ. ಈ ಗೀತೆಯನ್ನು ನಾಗಾರ್ಜುನ್ ಶರ್ಮಾ ಬರೆದಿದ್ದು, ನಿತೇಶ್ ಸಿಂಗ್ ರಜಪೂತ್ ಹಾಗೂ ಸುರಭಿ ಭಾರದ್ವಾಜ್ ಹಾಡಿದ್ದಾರೆ. ಹಾಡಿಗೆ ಆನಂದ್ ರಾಜ್‌ವಿಕ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆ ಕೂಡ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಸಾವು, ತಿಥಿ ಮಧ್ಯದ 11 ದಿನದಲ್ಲಿ ನಡೆಯುವ ಸುಂದರ ಲವ್ ಹಾಗೂ ಫ್ಯಾಮಿಲಿ ಕಥೆಯನ್ನು ಒಳಗೊಂಡ ಸಿನಿಮಾ ‘ಲವ್ ಟುವರ್ಡ್ಸ್ ಫ್ಯಾಮಿಲಿ’. ಈ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ, ಚಂದ್ರ ಮೋಹನ್ ನಿರ್ದೇಶನ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಗೆಳೆಯನಾದ ಚಂದ್ರ ಮೋಹನ್ ಕನ್ನಡದ ಖ್ಯಾತ ನಿರ್ದೇಶಕರ ಕೈಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, 2015ರಲ್ಲಿ ತೆರೆಕಂಡ `ಬಾಂಬೆ ಮಿಠಾಯಿ’ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು. ನಂತರ ‘ಡಬಲ್ ಇಂಜಿನ್’, ‘ಫಾರೆಸ್ಟ್’ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ಇದೀಗ ಇವರ ನಿರ್ದೇಶನದ ‘ಲವ್ ಟುವರ್ಡ್ಸ್ ಫ್ಯಾಮಿಲಿ’ ಸಿನಿಮಾ ಇದೇ ಅಕ್ಟೋಬರ್ 31ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಇನ್ನು ಈ ಚಿತ್ರದಲ್ಲಿ ನಾಯಕನಾಗಿ ಅಭಿನಯ ಮಾಡಿದ್ದಾರೆ ಯುವ ನಟ ಧೀರನ್. ಇವರು ‘ನಾಟಕ ಸ್ಕೋಲ್ ಆಫ್ ಡ್ರಾಮಾ’ (ಎನ್.ಎಸ್.ಡಿ) ನಲ್ಲಿ ಟ್ರೇನಿಂಗ್ ಪಡೆದು ಹಲವು ನಾಟಕ, ಸೀರಿಯಲ್‌ಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರಿಕ್ಷೆಗೆ ಇಳಿದಿದ್ದಾರೆ. ಅಂದಂಗೆ ಈ ಚಿತ್ರದಲ್ಲಿ ಧೀರನ್‌ಗೆ ನಾಯಕಿಯಾಗಿ ರಾಧೆ ಆಭಿನಯ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ಚಿತ್ರದ ಎರಡನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಿರುವುದು ಖುಷಿ ಇದೆ. ಜೊತೆಗೆ ಇಲ್ಲಿಯ ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದು, ಜನ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ’ ಎಂದು ಖುಷಿ ಹಂಚಿಕೊಂಡರು.
ನಂತರ ಚಿತ್ರದ ನಿರ್ಮಾಪಕ ಲಿಂಗರಾಜ್ ಬೀದರ್, ‘ನಾನು ಬೆಳಗಾವಿಯಲ್ಲಿ ಹತ್ತು ವರ್ಷ ಇದ್ದೆ. ಈಗ ಉತ್ತರ ಕರ್ನಾಟಕಕ್ಕೆ ಬಂದು ನಮ್ಮ ಚಿತ್ರದ ಹಾಡು ಬಿಡುಗಡೆ ಮಾಡುತ್ತಿರುವುದು ತುಂಬಾ ಖುಷಿ ಇದೆ. ಉ.ಕ. ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಅಕ್ಟೋಬರ್ 31ರಂದು ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಗೆಲ್ಲಿಸಿಕೊಟ್ಟರೆ, ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಸಿನಿಮಾ ಮಾಡುತ್ತೇನೆ’ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸ್ಥಳಿಯ ಮುಖಂಡರಾದ ಅಪ್ಪಣ್ಣ, ಅರವಿಂದ್ ಕಟಗಿ, ಮಲ್ಲಿಕಾರ್ಜುನ್ ಕುನ್ನೂರ, ಶಿವಾನಂದ್ ಮುತ್ತಣ್ಣವರ್ ಮುಂತಾದವರು ಉಪಸ್ಥಿತರಿದ್ದರು.
