
ಕರ್ನಾಟಕದ ರಾಜಕೀಯ ಮೇಲಾಟದಲ್ಲಿ ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕ. ಚುನಾವಣಾ ತಂತ್ರಗಾರಿಕೆಯಿಂದಲೇ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ. ಅಂತೆಯೇ ಅಹಿಂದ ನಾಯಕನ ಚಾಣಾಕ್ಷತನ ಎದುರಿಸಲಾಗದೇ ಸಾಹುಕಾರನನ್ನು ಬಿಜೆಪಿ ಟಾರ್ಗೆಟ್ ಮಾಡಿದೆಯೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಸಾಹುಕಾರ ನಿವಾಸ ಹಾಗೂ ಉದ್ಯಮ ಸಂಸ್ಥೆಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ED) ದಾಳಿಗಳು ಈ ಸಂಚಿನ ಭಾಗವೇ? ಎಂಬ ಪ್ರಬಲ ಚರ್ಚೆ ಹಾಗೂ ವಿಶ್ಲೇಷಣೆಗಳು ರಾಜಕೀಯ ಪಡಸಾಲೆಯಲ್ಲಿ ಬಿಸಿಯೇರಿಸಿವೆ.
ಉಪಸಮರಗಳಲ್ಲಿ ಜಾರಕಿಹೊಳಿ ತಂತ್ರಗಾರಿಕೆ; ಕಾಂಗ್ರೆಸ್ ಭರ್ಜರಿ ಜಯ:
ಬಾಗಲಕೋಟೆ, ಹಾವೇರಿ ಉಪಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಸುಲಭದ ಹಾದಿಯಾಗಿರಲಿಲ್ಲ. ಆದರೆ,
ಜಾರಕಿಹೊಳಿ ಅವರು ಅಖಾಡಕ್ಕಿಳಿದು, ತಳಮಟ್ಟದ ನಾಯಕರನ್ನು ಒಗ್ಗೂಡಿಸಿ, ‘ಅಹಿಂದ’ ಮತಗಳನ್ನ ಕ್ರೋಡೀಕರಿಸಿದರು. ಕ್ಷೇತ್ರದ ನಾಯಕರಲ್ಲಿನ ಅಸಮಾಧಾನವನ್ನು ಶಮನಗೊಳಿಸಿ, ಎರಡೂ ಕ್ಷೇತ್ರಗಳಲ್ಲಿ ಪ್ರಬಲ ಎದುರಾಳಿಗಳನ್ನು ಮಣಿಸಿ, ಕಾಂಗ್ರೆಸ್ ಪಕ್ಷಕ್ಕೆ ಜಯ ತಂದಿದ್ದರು. ಉಪಸಮರಗಳಲ್ಲಿ ಸಿಕ್ಕ ಈ ಜಯವು ಬಿಜೆಪಿ ಪಾಳೆಯಕ್ಕೆ ನೇರ ಸವಾಲಾಗಿ ಪರಿಣಮಿಸಿತು.
ಉತ್ತರ ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ತಂತ್ರಗಾರಿಕೆ:
2023ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲು ಕಾರಣ ಸತೀಶ್ ಜಾರಕಿಹೊಳಿ ತಂತ್ರಗಾರಿಕೆ.
ಕಳೆದ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಗಡಿಯಲ್ಲಿನ 90 ಕ್ಷೇತ್ರಗಳ ಪೈಕಿ 59ರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲು ಇವರ ತಂತ್ರಗಾರಿಕೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು.
ಅಹಿಂದ ಪ್ರಭಾವಿ ನಾಯಕರಾದರೂ ಎಲ್ಲ ಸಮುದಾಯಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸತೀಶ್ ಜಾರಕಿಹೊಳಿ ಅವರಿಗೆ ಮತ ಸೆಳೆಯುವ ಹಾಗೂ ಬಂಡಾಯ ಶಮನಗೊಳಿಸುವ ಶಕ್ತಿ ಇದೆ. ಜೊತೆಗೆ ಅದ್ಭುತ ಸಂಘಟನಾಕಾರ.
ತವರು ಜಿಲ್ಲೆಯಲ್ಲಿ ಪ್ರಭಾವಿ: ತಮ್ಮ ಸ್ವಂತ ಕ್ಷೇತ್ರ ಯಮಕನಮರಡಿಯಲ್ಲಿ ಗೆಲ್ಲುವುದಷ್ಟೇ ಅಲ್ಲದೆ, ಅಕ್ಕಪಕ್ಕದ ಹಲವು ಕ್ಷೇತ್ರಗಳಲ್ಲಿ ಬಂಡಾಯ ಶಮನಗೊಳಿಸಿದ್ದರು. ಜೊತೆಗೆ ಆರ್ಥಿಕ ಹಾಗೂ ಸಾಮಾಜಿಕ ಜಾಲವನ್ನು ಬಳಸಿ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜ್ಯದಲ್ಲಿ ಅತೀ ಹೆಚ್ವು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ 18 ರ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಿಸಿರುವ ಹಿಂದೆ ಸಾಹುಕಾರರ ರಾಜಕೀಯ ತಂತ್ರಗಾರಿಕೆ ಅಡಗಿದೆ.
ಸಾಹುಕಾರ ಮೇಲೆ ಇಡಿ (ED) ದಾಳಿ: ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್
ವಿಶ್ಲೇಷಕರ ಪ್ರಕಾರ,
ಸತೀಶ್ ಜಾರಕಿಹೊಳಿ ಅವರನ್ನು ಕೇವಲ ರಾಜಕೀಯ ಕಣದಲ್ಲಿ ಎದುರಿಸಿ ಮಣಿಸುವುದು ಬಿಜೆಪಿಗೆ ಸುಲಭವಾಗಿಲ್ಲ ಎಂಬುದಕ್ಕೆ ಬಲವಾದ ಕಾರಣಗಳಿವೆ…
ಸ್ವತಂತ್ರ ಆರ್ಥಿಕ ಬಲ ಮತ್ತು ಕೌಟುಂಬಿಕ ಹಿನ್ನಲೆ: ಸತೀಶ್ ಜಾರಕಿಹೊಳಿ ಅವರಿಗೆ ಕೌಟುಂಬಿಕ ಹಿನ್ನೆಲೆಯ ಬಲವಿದೆ. ಜೊತೆಗೆ ‘ಸತೀಶ್ ಶುಗರ್ಸ್’ ಸೇರಿದಂತೆ ಸ್ವಂತ ಉದ್ಯಮಗಳ ಮೂಲಕ ಆರ್ಥಿಕ ಶಕ್ತಿಯೂ ಇದೆ.
ಅಹಿಂದ ನಾಯಕ: ವಾಲ್ಮೀಕಿ (ಎಸ್ಟಿ) ಸಮುದಾಯದ ಮುಂಚೂಣಿ ನಾಯಕ ಹಾಗೂ ವಿಚಾರವಾದಿ ಇಮೇಜ್. ಜೊತೆಗೆ ಅಹಿಂದ ಪ್ರಬಲ ನಾಯಕರಾಗಿದ್ದು, ಮುಂದಿನ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಹೀಗಾಗಿ, ಜಾರಕಿಹೊಳಿ ಅವರನ್ನು ಕಟ್ಟಿಹಾಕಲು ಇಡಿ (ED) ಅಸ್ತ್ರವನ್ನು ಬಳಸಲಾಗುತ್ತಿದೆ ಎಂಬ ಆರೋಪ ಬಲವಾಗಿದೆ.
ಕಾಂಗ್ರೆಸ್ ಆರೋಪ: ಸಾರ್ವತ್ರಿಕ ಚುನಾವಣೆಯಲ್ಲಷ್ಟೇ ಅಲ್ಲ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯವಿರುವ ಪ್ರಬಲ ‘ಅಹಿಂದ’ ನಾಯಕನ ನೈತಿಕ ಹಾಗೂ ರಾಜಕೀಯ ಬಲವನ್ನು ಕುಗ್ಗಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ಗಂಭೀರ ಆರೋಪ.
ಬಿಜೆಪಿಯ ಪ್ರತಿವಾದ: ತನಿಖಾ ಸಂಸ್ಥೆಗಳು ಲೋಕೋಪಯೋಗಿ ಇಲಾಖೆಯ (PWD) ಯೋಜನಾ ವಹಿವಾಟುಗಳು ಹಾಗೂ ಆರ್ಥಿಕ ನಿಯಮಗಳ (FEMA) ಉಲ್ಲಂಘನೆಯ ದೂರುಗಳ ಆಧಾರದಲ್ಲಷ್ಟೇ ತನಿಖೆ ನಡೆಸುತ್ತಿವೆ ಎನ್ನುವುದು ಬಿಜೆಪಿ ವಾದ.
ಮತ ಸೆಳೆಯುವ ಸಾಮರ್ಥ್ಯ, ಸಂಘಟನಾಕಾರ, ಅಹಿಂದ ಪ್ರಬಲ ನಾಯಕನಾಗಿರುವುದರಿಂದ ಸತೀಶ್ ಜಾರಕಿಹೊಳಿ ಅವರನ್ನು ಟಾರ್ಗೇಟ್ ಮಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲ ಕಡಿಮೆ ಮಾಡುವ ಸಂಚು ಪ್ರತಿಪಕ್ಷ ರೂಪಿಸಿದೆ ಎಂಬ ಬಲವಾದ ಆರೋಪ ಕೇಳುಬರುತ್ತಿದೆ.
