
ಬೆಳಗಾವಿ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಫಾರ್ಮ್ ನಂ. 7 ದುರುಪಯೋಗಪಡಿಸಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಹಾಗೂ ಇತರರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಧಾರವಾಡದ ಕರ್ನಾಟಕ ಹೈಕೋರ್ಟ್ ಪೀಠದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ವೆಂಕಟೇಶ ನಾಯಕ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಅರುಣ ಶ್ಯಾಮ ವಾದ ಮಂಡಿಸಿದ್ದರು.
ಇದೇ ರೀತಿಯ ಪ್ರಕರಣದಲ್ಲಿ ಬೆಂಗಳೂರಿನ ಪ್ರಧಾನ ಪೀಠ ಇತ್ತೀಚೆಗೆ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯ, ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳ ಕುರಿತು ಚುನಾವಣಾ ಆಯೋಗ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲದಿರುವ ಸಂದರ್ಭದಲ್ಲಿ ಕ್ರಿಮಿನಲ್ ದೂರು ದಾಖಲಿಸಿರುವುದು ಅವಧಿಪೂರ್ವ ಕ್ರಮವಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.
ಈ ಹಂತದಲ್ಲಿ ನ್ಯಾಯಾಂಗ ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ ಮುಂದಿನ ವಿಚಾರಣೆಯವರೆಗೆ ಪ್ರಕರಣದ ತನಿಖೆಗೆ ತಡೆ ನೀಡುವುದು ಸೂಕ್ತ ಎಂದು ನ್ಯಾಯಪೀಠ ತಿಳಿಸಿದೆ.
ಹೈಕೋರ್ಟ್‌ನ ಈ ಮಧ್ಯಂತರ ಆದೇಶದಿಂದ ಪ್ರಕರಣದ ತನಿಖೆಗೆ ತಾತ್ಕಾಲಿಕ ವಿರಾಮ ದೊರೆತಿದ್ದು, ಅ.29ರಂದು ನಡೆಯಲಿರುವ ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.
