
ಬೆಳಗಾವಿ
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ತರಕಾರಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ವ್ಯಾಪಾರದಲ್ಲಿ ಪಾರದರ್ಶಕತೆ ಇಲ್ಲದೆ, ರಸೀದಿ ಹಾಗೂ ತೂಕದ ದಾಖಲೆಗಳಿಲ್ಲದೆ ವಹಿವಾಟು ನಡೆಯುತ್ತಿರುವುದನ್ನು ಗಮನಿಸಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ ಬೆಳ್ಳಂ ಬೆಳಗ್ಗೆ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತರ ತಂಡ, ತರಕಾರಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿತು. ರೈತರಿಂದ ತರಕಾರಿ ಖರೀದಿಸುವ ವ್ಯಾಪಾರಸ್ಥರ ಬಳಿ ಖರೀದಿ ರಸೀದಿಗಳಿಲ್ಲದಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳು, “ತರಕಾರಿಯನ್ನು ಯಾರಿಂದ ಖರೀದಿಸುತ್ತೀರಿ? ರೈತರಿಗೆ ಯಾವ ದರ ನೀಡುತ್ತೀರಿ? ರಸೀದಿ ಎಲ್ಲಿದೆ, ತೂಕದ ದಾಖಲೆ ಎಲ್ಲಿದೆ?” ಎಂದು ಪ್ರಶ್ನಿಸಿದರು.
ಎಪಿಎಂಸಿಗೆ ಸಂಬಂಧವಿಲ್ಲದ ವ್ಯಕ್ತಿಗಳೂ ರೈತರಿಂದ ತರಕಾರಿ ಖರೀದಿಸುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಹಿವಾಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತರಕಾರಿ ಬೆಳೆದು ಮಾರುಕಟ್ಟೆಗೆ ತಂದಿದ್ದ ರೈತ ನಾಗಪ್ಪ ತನಶಿ ಅವರನ್ನು ಸ್ಥಳದಲ್ಲಿಯೇ ವಿಚಾರಿಸಿದಾಗ, ತಾವು ತಂದಿದ್ದ ಕೊತ್ತಂಬರಿಗೆ 2,000 ರೂ. ನೀಡಲಾಗಿದೆ. ಇದರಲ್ಲಿ ಶೇ.10ರಷ್ಟು ಕಮಿಷನ್ ಕೊಡಬೇಕಿದೆ. ಆದರೆ, ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ರಸೀದಿ ನೀಡಿಲ್ಲ ಎಂದು ಅವರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.
ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ತಕ್ಷಣ ಸ್ಥಳಕ್ಕೆ ಆಗಮಿಸುವಂತೆ ಎಪಿಎಂಸಿ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಅವರಿಗೆ ಸೂಚಿಸಿ ತರಾಟೆಗೆ ತೆಗೆದುಕೊಂಡರು. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಬಳಿ ರಸೀದಿಗಳಿಲ್ಲದೆ ವಹಿವಾಟು ನಡೆಯುತ್ತಿದೆ. ರೈತರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಮೇಲ್ನೋಟಕ್ಕೆ ರೈತರಿಗೆ ಅನ್ಯಾಯವಾಗುತ್ತಿರುವುದು ಕಂಡುಬರುತ್ತಿದೆ. ರಸೀದಿ ಪುಸ್ತಕ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಾರುಕಟ್ಟೆಯಲ್ಲಿನ ಮೂಲಸೌಕರ್ಯಗಳ ಅವ್ಯವಸ್ಥೆಯನ್ನೂ ಉಪ ಲೋಕಾಯುಕ್ತರು ಗಮನಿಸಿದ ಅವರು, ಕುಡಿಯುವ ನೀರಿನ ಘಟಕದಲ್ಲಿ ತರಕಾರಿ ಇಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಾರ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ಆಕ್ಷೇಪಿಸಿದರು.
ಎಪಿಎಂಸಿ ಕಾರ್ಯದರ್ಶಿಗಳು ತಮ್ಮ ಇಷ್ಟದಂತೆ ಮಾರುಕಟ್ಟೆಯನ್ನು ನಡೆಸುತ್ತಿರುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಾರುಕಟ್ಟೆಯಲ್ಲಿನ ವ್ಯವಸ್ಥೆ, ರೈತರ ಹಿತಾಸಕ್ತಿ ಕಾಯಬೇಕು. ನಿಮಗೆ ಬೇಕಾದ ರೀತಿ ಮಾರುಕಟ್ಟೆ ನಡೆಸಿಕೊಂಡು ಹೋಗುವುದಲ್ಲ ಎಂದು ಕಿಡಿಕಾರಿದರು.
