18 ವರ್ಷಗಳ ಆಸ್ತಿ ಆದಾಯ ವಾಪಸ್ ನೀಡಲು ಒತ್ತಾಯ; ವಕ್ಫ್ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಆಗ್ರಹ
ಹುಬ್ಬಳ್ಳಿ: ನಗರದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಭಾರೀ ಪ್ರಮಾಣದ ಹಣಕಾಸು ಅಕ್ರಮ ಹಾಗೂ ಆಡಳಿತಾತ್ಮಕ ದುರುಪಯೋಗ ನಡೆದಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದ ಮುಖಂಡರು ಗುರುವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಕುಂಬಾರ ಗಲ್ಲಿಯ ಮಸೀದಿ ಜಮಾತ್ಗೆ ದಾನಿಯೊಬ್ಬರು ನೀಡಿದ್ದ ಜಮೀನನ್ನು ವಕ್ಫ್ ಆಸ್ತಿಯಾಗಿ ನೋಂದಣಿ ಮಾಡದೆ, ಕಳೆದ 18 ವರ್ಷಗಳಿಂದ ಅದರಿಂದ ಬಂದ ಆದಾಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ಸದರಿ ಆಸ್ತಿಯನ್ನು ವಕ್ಫ್ ವ್ಯಾಪ್ತಿಗೆ ಸೇರಿಸಬೇಕು, 18 ವರ್ಷಗಳ ಆದಾಯದ ಸಂಪೂರ್ಣ ಲೆಕ್ಕಪತ್ರ ಪಡೆದು ಹಣವನ್ನು ವಾಪಸ್ ವಸೂಲಿ ಮಾಡಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ವಕ್ಫ್ ಮಂಡಳಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದಾಖಲೆಗಳೊಂದಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ, ಧಾರವಾಡ ಜಿಲ್ಲಾ ವಕ್ಫ್ ಅಧಿಕಾರಿಯ ವಿರುದ್ಧ ನಿಷ್ಪಕ್ಷಪಾತ ಇಲಾಖಾ ತನಿಖೆ ನಡೆಸಿ, ಆರೋಪಗಳು ಸಾಬೀತಾದಲ್ಲಿ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು. ಕುಂಬಾರವಾಡ ಸುನ್ನಿ ಜಮಾತ್ನ ಆಡಳಿತ ಮತ್ತು ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ನೇರ ಆಡಳಿತಾತ್ಮಕ ಉಸ್ತುವಾರಿ ವಹಿಸಿಕೊಳ್ಳಬೇಕು. ಒಂದು ತಿಂಗಳೊಳಗೆ ಸಂಪೂರ್ಣ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಕೇಶ್ವಾಪುರದ ಆಜಾದ್ ಕಾಲೋನಿ ಮಸೀದಿಯ ಆಡಳಿತ ಹಾಗೂ ಹಣಕಾಸು ವಹಿವಾಟುಗಳ ಪರಿಶೀಲನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಕುಂಬಾರ ಗಲ್ಲಿ ಮಸೀದಿ ಜಮಾತ್ನ ಮುತವಲ್ಲಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರ ಹಾಗೂ ವಕ್ಫ್ ಸಚಿವರಿಗೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮ್ಮಿಹುಲ್ಲಾ ಬೆಳಗಾವಿ, ಫೇಸ್ ಆ್ಯಂಡ್ ಸ್ಟೆಮ್ ಫೌಂಡೇಶನ್ ಕಾರ್ಯದರ್ಶಿ ಶಫಕತಲಿ ಬಡಿಗೇರ, ಪ್ರೊ. ಅನಾಪಲ್, ಕೆಡಬ್ಲ್ಯೂಪಿಸಿ ಅಧ್ಯಕ್ಷ ಮೀರ್ ಮುಜಿಬಲಿ, ಸಮಾಜದ ಮುಖಂಡರಾದ ಮುಸ್ತಾಕ್ ಫೀರಜಾದೆ, ಎಂ.ಎಂ. ತೇಗೂರ, ಭಾಗವಾನ್, ಅಳ್ನಾವರದ ಬಂದಾನವಾಜ್ ಮಕಾಂದರ್, ಗೌಸುಮುದ್ದಿನ್ ಕಳ್ಳಿಮನಿ, ಮಹಮ್ಮದ್ ರಫೀಕ್ ಮೇಲಿನಮನಿ, ಮಹಮ್ಮದ್ ರಫೀಕ್ ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
