
ಬೆಳಗಾವಿ
ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ 2025ರ ಶ್ರೀ ಗುರುಶಾಂತೇಶ್ವರ ದಿನದರ್ಶಿಕೆ ಬಿಡುಗಡೆಯನ್ನು ಬೆಂಗಳೂರಿನ ನೈಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಭಾನುವಾರ ಬಿಡುಗಡೆಗೊಳಿಸಿದರು.
ಗುರುಶಾಂತೇಶ್ವರ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಶೋಕ ಖೇಣಿ ಅವರು, ಹುಕ್ಕೇರಿ ಹಿರೇಮಠದ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ಬಹಳ ಪುರಾತನ ಮಠವಾಗಿ ಗಡಿಭಾಗದಲ್ಲಿ ಧರ್ಮದ ಜೊತೆಗೆ ಕನ್ನಡದ ಸೇವೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಹಿಳೆಯರಿಗೆ ವೇದವನ್ನು ಕಲಿಸುತ್ತಿರುವುದು ವಿಶೇಷ ಹಾಗೆಯೇ ಸಾವಿರಾರು ಮಕ್ಕಳಿಗೆ ವೇದ ಸಂಸ್ಕೃತ ಜ್ಯೋತಿಷ್ಯ ಕಲಿಸುವುದರ ಮೂಲಕ ಭಾರತೀಯ ಪರಂಪರೆ ಎತ್ತಿ ಹಿಡಿದ ಕ್ರಿಯಾಶೀಲ ಶಿವಾಚಾರ್ಯರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಮಾತನಾಡಿ, ಇಂದು ಹುಕ್ಕೇರಿ ಹಿರೇಮಠ ರಾಜ್ಯದ ತುಂಬಾ ಹೆಸರಾಗಿದೆ ಎಂದರೆ ಈ ಶ್ರೀಮಠದಿಂದ ನಡೆಯುವ ಸಮಾಜಮುಖಿ ಕಾರ್ಯಕ್ರಮ. ಇವರ ಕಾರ್ಯಕ್ರಮವನ್ನು ಎಲ್ಲರೂ ಕೂಡ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಅಶೋಕ ಖೇಣಿ ಯುತ್ ಮುಮೈಂಟ್ ನ ರಾಜ್ಯಾಧ್ಯಕ್ಷ ಡಾ. ಎಚ್.ವಿ.ನಾಗೇಂದ್ರ ಪ್ರಸಾದ ಅವರು ಶ್ರೀಮಠದ ವಿಚಾರ ಕುರಿತು ಮಾತನಾಡಿದರು.
ಸಾನಿದ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಪ್ರತಿ ವರ್ಷ ಗುರುಶಾಂತೇಶ್ವರ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಈ ದಿನ ದರ್ಶಿಕೆಯಲ್ಲಿ ಎಲ್ಲಾ ಮಾಹಿತಿಯ ಜೊತೆಗೆ ಜನರಿಗೆ ಅನುಕೂಲವಾಗುವ ಮುಹೂರ್ತವನ್ನು ಪ್ರಕಟಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಅಶೋಕ ಖೇಣಿ ಅವರು ಬಿಡುಗಡೆಗೊಳಿಸಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಳಾ ಮೆಟಗುಡ್ಡ, ಹಿರಿಯ ಕನ್ನಡ ಹೋರಾಟಗಾರ ಪಾಲನೇತ್ರಾ, ಗಡಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಅಶೋಕ ಚಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
