
ಬೆಳಗಾವಿ
ಪಂಚಮಸಾಲಿ ಸಮಾಜದ ಮುಖಂಡರು ಕಲ್ಲು ಎಸೆದಿಲ್ಲ. ಬದಲಾಗಿ ಪೊಲೀಸರು ಬಿನ್ ಡ್ರೆಸ್ ಮೇಲೆ ಬಂದು ಕಲ್ಲು ಎಸೆದು ನಮ್ಮ ಸಮಾಜದವರ ಮೇಲೆ ಲಾಠಿ ಚಾಜ್೯ ಮಾಡಿದ್ದಾರೆ ಎಂದು
ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ಬೆಳಗಾವಿ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೊಲೀಸರು ಇಷ್ಟೊಂದು ದೌರ್ಜನ್ಯ ಮಾಡುವುದು ಬೇಕಿತ್ತಾ ? ನಮ್ಮ ಸಮಾಜದರ ಹೆಸರು ಕೆಡಿಸುವ ಹುನ್ನಾರ ಮಾಡಿದರು. ಮೊದಲು ಪೊಲೀಸರ ಮೇಲೆ ಕಲ್ಲು ಎಸೆದಿದ್ದು ಬಿನ್ ಡ್ರೆಸ್ ಮೇಲೆ ಇದ್ದ ಪೊಲೀಸರು. ಪೊಲೀಸರು ವ್ಯವಸ್ಥಿತವಾಗಿ ಹಲ್ಲೆ ಮಾಡಿದ್ದಾರೆ. ನಮ್ಮ ಸಮಾಜದ ರೈತರ ಮೇಲೆ ದಾಖಲಾದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯ ಎಡಿಜಿಪಿಯಾಗಿದ್ದ ಅಲೋಕಕುಮಾರ್ ಸುಮಾರು 6 ಲಕ್ಷ ಸಮಾಜದವರು ಹೋರಾಟ ಮಾಡಿದಾಗ ನಮಗೆ ತಿಳಿ ಹೇಳಿದರು. ಆದರೆ ಇಂದಿನ ಎಡಿಜಿಪಿ ಆರ್. ಹಿತೇಂದ್ರ ನಮ್ಮ ಸಮಾಜದವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದರು.
ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ನಾಳೆಯಿಂದ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ. ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರೆ ನೀಡಿದರು.
ಕಳೆದ ನಾಲ್ಕು ವರ್ಷದಿಂದ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಕೊಡಬೇಕೆಂದು ನಾಲ್ಕು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಂದಿಗೂ ನಮ್ಮ ಸಮಾಜ ಅಶಾಂತಿ ಮಾಡಿಲ್ಲ. ಯಾವ ಸರಕಾರವೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ ಎಂದರು.
ಕಳೆದ 20 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ನಮ್ಮ ಬೇಡಿಕೆಗೆ ಸ್ಪಂದನೆ ಮಾಡಲಿಲ್ಲ. ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟಕ್ಕೆ ಕರೆ ಕೊಟ್ಟಿದ್ದೇವು. ಅದರಂತೆ ಲಕ್ಷಾಂತರ ಸಂಖ್ಯೆಯಲ್ಲಿ ಕೊಂಡುಸಕೊಪ್ಪದ ಬಳಿ ಪ್ರತಿಭಟನಾ ಸಮಾವೇಶ ನಡೆಸಿದಾಗ ಮೂವರು ಸಚಿವರು ಆಗಮಿಸಿ ಉತ್ತಮ ಅಭಿಪ್ರಾಯ ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಆದರೆ ನಿಮ್ಮ ಅಭಿಪ್ರಾಯ ಆಲಿಸಲು ಬಂದಿದ್ದೇವೆ ಎಂದರು. ಇದಕ್ಕೆ ನಮ್ಮ ಸಮಾಜದವರು ಮುಖ್ಯಮಂತ್ರಿ ಬರಬೇಕೆಂದು ಪಟ್ಟು ಹಿಡಿದರು ಎಂದರು.
ಜಿಲ್ಲಾಡಳಿತ ಟ್ರ್ಯಾಕ್ಟರ್ ಹೋರಾಟ ನಿಷೇಧ ಮಾಡಿತ್ತು. ನಾವು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡುವ ಪ್ರಶ್ನೆಯೇ ಇಲ್ಲ. ನಮಗೆ ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವು. ನಮ್ಮ ಮೇಲೆ ಲಾಠಿ ಚಾಜ್೯ ಮಾಡಿದ್ದು ಯಾಕೆ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಲಿಂಗಾಯತ ವಿರೋಧಿಯಾಗಿದೆ. ಲಾಠಿ ಚಾಜ್೯ ಮಾಡಿದ ಮೇಲೆ ಮಾತುಕತೆಗೆ ಕರೆಯುತ್ತವೆ ಎಂದು ಹೇಳಿಕೆ ನೀಡಿದರು. ಮೊದಲೇ ಹೇಳಿದ್ದರೆ ಹೋಗುತ್ತಿದ್ದೇವು. ಪೊಲೀಸ್ ಅಧಿಕಾರಿಗಳು ನಮ್ಮ ಸಮಾಜದ ಮೇಲೆ ಹಲ್ಲೆ ಮಾಡಿರುವ ಕುರಿತು ಕೊಂಡುಸಕೊಪ್ಪದ ಗ್ರಾಮದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಹೆಬ್ಬಾಳ್ಕರ್, ಪಂಚಮಸಾಲಿ ಮುಖಂಡರಾದ ನಿಂಗಪ್ಪ ಪಿರೋಜಿ, ಗುಂಡು ಪಾಟೀಲ್, ಕಾಕಾಗೌಡ ಪಾಟೀಲ್, ಆರ್.ಪಿ.ಪಾಟೀಲ್, ಅಡಿವೇಶ ಇಟಗಿ, ರಾಜು ಮಗದುಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
