
ಬೆಳಗಾವಿ
ವಿಧಾನಸಭೆಯಿಂದ ಅಂಗೀಕೃತಗೊಂಡ ರೂಪದಲ್ಲಿರುವ 2024 ನೇ ಸಾಲಿನ ಕರ್ನಾಟಕ ಮೋಟಾರು ವಾಹನ ತೆರಿಗೆ ನಿರ್ಧರಣಾ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಇಂದು ವಿಧಾನಪರಿಷತ್ ಅನುಮೋದನೆ ನೀಡಿತು.
ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಸೂದೆಯನ್ನು ಮಂಡಿಸಿದರು.
ನಂತರ ಮಸೂದೆಯ ಬಗ್ಗೆ ವಿವರ ನೀಡಿ ಸಂತೋಷ್ ಲಾಡ್ ಅವರು, ಒಮ್ಮೆ ಮಾತ್ರ ತೆರಿಗೆ ಸಂಗ್ರಹ ಮಾಡಲಾಗುವುದು. ಇದು ಅಸಂಘಟಿತ ಕಾರ್ಮಿಕರಿಗೆ ಸಹಾಯವಾಗಲಿದೆ. ಟ್ರಾನ್ಸ್‌ಪೋರ್ಟ್ ಬೋರ್ಡ್ ಆಗಲು ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಸಹಕಾರ ಸಾಕಷ್ಟು ಇದೆ. ಸಾರಿಗೆ ವಲಯದಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡುವವರಿಗೆ ಈ ತೆರಿಗೆಯಿಂದ ಸಹಾಯವಾಗಲಿದೆ. ಈ ತೆರಿಗೆಯಿಂದ ಹಲವಾರು ಸಾಮಾಜಿಕ ಸೇವಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ನಲವತ್ತು ಲಕ್ಷಕ್ಕೂ ಹೆಚ್ಚು ನೋಂದಣಿಯಾಗಲಿದ್ದಾರೆ ಎಂಬ ನಿರೀಕ್ಷೆ ಇದೆ. ಬಹಳಷ್ಟು ವರ್ಷಗಳಿಂದ ಇವರಿಗೆ ಯಾವುದೇ ಸೌಲಭ್ಯ ಇರಲಿಲ್ಲ ಎಂದರು. ಶಾಸಕರಾದ ತಿಪ್ಪೇಸ್ವಾಮಿ, ಐವನ್ ಡಿಸೋಜ, ನವೀನ್, ಬಿ ಕೆ ಹರಿಪ್ರಸಾದ್, ಎಂ ನಾಗರಾಜು, ಛಲವಾದಿ ನಾರಾಯಣ ಸ್ವಾಮಿ ಅವರು ಮಸೂದೆಯ ಬಗ್ಗೆ ವಿವರ ಕೋರಿದರು.
ಇದಕ್ಕೆ ಉತ್ತರಿಸಿದ ಲಾಡ್ ಅವರು, ಟ್ರಾನ್ಸ್‌ಪೋರ್ಟ್ ಬೋರ್ಡ್ ನಿಂದ ತೆರಿಗೆ ಸಂಗ್ರಹ ಮಾಡಿ ಕಾರ್ಮಿಕ ಇಲಾಖೆಗೆ ನೀಡುತ್ತಾರೆ. ಅದರ ಮೂಲಕ ನಾವು ಕಾರ್ಮಿಕರಿಗೆ ಸೇವಾ ಸೌಲಭ್ಯ ನೀಡುತ್ತಿದ್ದೇವೆ. ಮಂಡಳಿ ನಡೆಸಲು ಆದಾಯ ಬೇಕು. ಆದರೂ ಹೆಚ್ಚು ತೆರಿಗೆ ವಿಧಿಸುತ್ತಿಲ್ಲ. ಈಗ ಎಲ್ಲದರ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಅಂತಹುದರಲ್ಲಿ ಈ ತೆರಿಗೆ ಹೆಚ್ಚು ಹೊರೆಯಾಗಲ್ಲ. ಸಾರಿಗೆ ವಲಯದ ಎಲ್ಲ ಕಾರ್ಮಿಕರು ಈ ಮಸೂದೆ ವ್ಯಾಪ್ತಿಗೆ ಬರುತ್ತಾರೆ. ಅವರಿಗೆ ಸೌಲಭ್ಯ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
