
ಹುಕ್ಕೇರಿ
ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ, ಶ್ರೀ ಗುರುಶಾಂತೇಶ್ವರ ಪ್ರೌಢಶಾಲೆ, ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, ಶ್ರೀ ವೀರುಪಾಕ್ಷಲಿಂಗಚಾರ್ಯ ವೈದಿಕ ಜ್ಯೋತಿಷ್ಯ ಪಾಠ ಶಾಲೆ, ಗುರುಶಾಂತೇಶ್ವರ ಇಂಗ್ಲಿಷ್ ಮಿಡಿಯಂ ಸ್ಕೂಲ್ ಇದರ ಸಹಯೋಗದಲ್ಲಿ ಹುಕ್ಕೇರಿಶ್ವರ ಉತ್ಸವ 2025ನೇ ಸಾಲಿನ ಸಾಧನಾ ಸಿರಿ ಪ್ರಶಸ್ತಿಯನ್ನು ಕೊಣ್ಣೂರು ಮರಡಿಮಠದ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಪವಾಡಿಶ್ವರ ಸ್ವಾಮೀಜಿ ಅವರಿಗೆ, ರಾಯಭಾಗ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೊಳೆ ಅವರಿಗೆ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿ ಅವರಿಗೆ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಪಾಟೀಲ್ ಅವರಿಗೆ ಅವಧೂತ್ ಶ್ರೀ ವಿನಯ ಗುರೂಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇಬಿಮಠದ ಶ್ರೀರಂಗಪಟ್ಟಣದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿನಯ ಗುರೂಜಿ ಅವರು, ಒಂದು ಸಂಸ್ಥೆ ಇನ್ನೊಂದು ಸಂಸ್ಥೆಯನ್ನು ಮೆಚ್ಚುವುದು ಬಹಳಷ್ಟು ವಿರಳ. ಆದರೆ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ ಈ ಸಂಸ್ಥೆ ಇನ್ನೊಂದು ಸಂಸ್ಥೆಯನ್ನು ಮೆಚ್ಚಿ ಸಾಧನ ಸಿರಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇದೊಂದು ಆಧರಣೀಯ ಹಾಗೂ ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾವೀರ ಶಿಕ್ಷ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅವರು, ನಮ್ಮ ಸಂಸ್ಥೆ ಇವತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ. ಇದಕ್ಕೆ ಸಾಧನ ಸಿರಿ ಪ್ರಶಸ್ತಿ ಲಭಿಸಿರುವುದು ಸಂತೋಷವಾಗಿದೆ ಎಂದರು.
ಕೊಣ್ಣೂರ ಮರಡಿಮಠದ ಕಾಡಸಿದ್ದೇಶ್ವರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪವಾಡಿಶ್ವರ ಸ್ವಾಮೀಜಿ ಮಾತನಾಡಿ, 1959ರಲ್ಲಿ ಸ್ಥಾಪನೆಯಾದ ನಮ್ಮ ಸಂಸ್ಥೆ ಇವತ್ತು ಎಲ್ ಕೆಜಿಯಿಂದ ಪದವಿ ಪೂರ್ವದವರೆಗೆ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಐಎಸ್ ಎಸ್ ಹಾಗೂ ಕೆಎಎಸ್ ತರಬೇತಿ ನೀಡುತ್ತಿದ್ದೇವೆ ಎಂದರು.
ರಾಯಬಾಗದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಐಹೊಳೆ ಮಾತನಾಡಿ, ಶಿಕ್ಷಣಕ್ಕೆ ನಾವು ಹೆಚ್ಚು ಮಹತ್ವ ಕೊಡಬೇಕಾಗಿದೆ. ದುಡ್ಡೇ ದೊಡ್ಡಪ್ಪ ಎನ್ನುವ ಕಾಲ ಹೋಯಿತು. ವಿದ್ಯೆ ಅದರಪ್ಪ ಎಂದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ್ ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ಹುಕ್ಕೇರಿಯಲ್ಲಿ ಆರಂಭಿಸಿರುವ ಸಂಸ್ಥೆ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ. ಇದನ್ನು ಮೆಚ್ಚಿ ಶ್ರೀಗಳು ಸಾಧನಾ ಸಿರಿ ಪ್ರಶಸ್ತಿ ನೀಡಿರುವುದು ಸಂತೋಷ ಎಂದರು.
