
ಬೈಲಹೊಂಗಲ: ಅನಾರೋಗ್ಯದಿಂದ ನಿಧನರಾದ ಪಂಜಾಬನ 4 ನೇ ಇಂಜಿನಿಯರ್ ಬಟಾಲಿಯನ್ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಸಮೀಪದ ಮುರಗೋಡ ಗ್ರಾಮದ ವಿಷ್ಣು ಶಿವಪುತ್ರಪ್ಪ ಕಾರಜೋಳ (25) ಅವರ ಅಂತ್ಯ ಸಂಸ್ಕಾರವನ್ನೂ ಸಕಲ ಗೌರವಗಳೊಂದಿಗೆ ಮುರಗೋಡ ಗ್ರಾಮದಲ್ಲಿ ನೆರವೇರಿಸಲಾಯಿತು.
ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಯೋಧ ಅನಾರೋಗ್ಯದಿಂದ ಮೇ. 15 ರಂದು ನಿಧನ ಹೊಂದಿದ್ದು, 16 ರಂದು ಬೆಳಗಾವಿ ಮೂಲಕ ಮುರಗೋಡ ಗ್ರಾಮಕ್ಕೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಊರಿಗೆ ಊರೇ ಮಮ್ಮಲ ಮರುಗಿತು, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ತಾಲೂಕಾ ಆಡಳಿತದ ವತಿಯಿಂದ ಭಾರತಾಂಬೆಯ ಹೆಮ್ಮೆಯ ಪುತ್ರನಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬೆಳಗಾವಿ ಸಾಂಬ್ರಾ ಆರ್ಮಿ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದ್ದರು. ಮೃತ ಸೈನಿಕ ವಿಷ್ಣು ಕಾರಜೋಳ ಇತನ ಪಾರ್ಥಿವ ಶರೀರದ ಮೆರವಣಿಗೆ ಶೋಭಾಯಾತ್ರೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸ್ಮಶಾನದಲ್ಲಿ ಹಿಂದೂ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇದೇ ವೇಳೆ ಮೃತ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕರ್ತವ್ಯದಲ್ಲಿ ಇರುವಾಗಲೇ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ ವಿಷ್ಣು ಕಾರಜೋಳನ ಪಾರ್ಥಿವ ಶರೀರವನ್ನು ಸರ್ಕಾರಿ ಜಾಗೆಯಲ್ಲಿ ಅಂತಿಮ ಸಂಸ್ಕಾರ ಮಾಡುವಂತೆ ನೂರಾರು ದೇಶ ಭಕ್ತ ಯುವಕರು ಪಟ್ಟು ಹಿಡಿದದ್ದರಿಂದ ಗ್ರಾಮದಲ್ಲಿ ಕೆಲ ಗಂಟೆಗಳ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮುರಗೋಡ ಪೊಲೀಸ್ ಠಾಣೆ ಸಿಪಿಐ ವೀರಯ್ಯ ಮಠಪತಿ ಹಾಗೂ ಯುವಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಯುವಕರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಯಿತು. ಯುವಕರು ಭಾರತ ಮಾತ ಕೀ ಜೈ ಘೋಷಣೆ ಮುಗಿಲು ಮುಟ್ಟುವಂತೆ ಕೂಗಿದರು.ಮೃತ ಯೋಧನ ಪಾರ್ಥಿವ ಶರೀರದ ಅಂತಿಮ ಶೋಭಾಯಾತ್ರೆ ಯಾತ್ರೆಯುದ್ದಕ್ಕೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ದೇಶಭಕ್ತಿ ಗೀತೆಗಳನ್ನು ಹಾಡಿದರು.
ದೇಶ ಭಕ್ತ ಸೈನಿಕನ ಅಂತಿಮ ಸಂಸ್ಕಾರಕ್ಕೆ ಸರ್ಕಾರಿ ಜಾಗ ನೀಡದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ದೇಶಭಕ್ತ ಯುವಕರ ಮೇಲೆ ಅಮಾನವೀಯವಾಗಿ ಲಾಠಿ ಚಾರ್ಜ್ ಮಾಡಿದ ಮುರಗೋಡ ಸಿಪಿಐ ವೀರಯ್ಯ ಮಠಪತಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸೈನಿಕರು ಹಾಗೂ ದೇಶ ಭಕ್ತ ಯುವಕರು ಮೇಲಾಧಿಕಾರಿಗಳಿಗೆ ಮನವಿಗೆ ಸಲ್ಲಿಸಲು ಮುಂದಾಗಿದ್ದಾರೆ.
