
ಬೆಳಗಾವಿ
ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿಯನ್ನು ವಿರೋಧಿಸಿ ಶುಕ್ರವಾರ ಕರವೇ ನಾರಾಯಣಗೌಡ ಬಣ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರಕಾರದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಬೆಳಗಾವಿ ಜನರ ವಿರೋಧ ಇದೆ. ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ಯುವ ಕಾಮಗಾರಿಗೆ ವಿರೋಧ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದರು.
ಈ ಹಿಂದೆಯೂ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರಿನ ಸಲುವಾಗಿ ಪೈಪ್ ಲೈನ್ ಕಾಮಗಾರಿಗೆ ನಮ್ಮ ನೀರು ನಮ್ಮ ಹಕ್ಕು ಹೋರಾಟದ ಅಡಿಯಲ್ಲಿ ವಿವಿಧ ಸಂಘ, ಸಂಸ್ಥೆಗಳು ಭಾಗವಹಿಸಿ ವಿರೋಧ ಮಾಡಿ ತಡೆಯಲಾಗಿತ್ತು. ಈಗ ಮತ್ತೇ ಸರಕಾರ ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಕಾಮಗಾರಿಗೆ ಅನುಮೋದನೆ ನೀಡಿದ್ದು ದೊಡ್ಡ ದುರಂತವೇ ಸರಿ ಎಂದರು.
ಹಿಡಕಲ್ ಜಲಾಶಯದಿಂದ ಬಾಗಲಕೋಟೆಯ ಜನರಿಗೂ ಕುಡಿಯುವ ನೀರು ಹೋಗುತ್ತಿದೆ. ಅಲ್ಲಿನ ಜನರು ಸಹ ಹಿಡಕಲ್ ಜಲಾಶಯದ ನೀರು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಜಿಲ್ಲೆಯ ಒಬ್ಬರೂ ಸಚಿವರನ್ನು ಮುಂದಾಳತ್ವ ವಹಿಸಿಕೊಂಡು ಬೆಳಗಾವಿ ಜನರ ನಿಯೋಗ ಕರೆದುಕೊಂಡು ಹೋಗಿ ಹಿಡಕಲ್ ಜಲಾಶಯದ ನೀರು ಉಳಿಸುವ ನಿಟ್ಟಿನಲ್ಲಿ ಸಚಿವರು ಮಾಡಬೇಕು ಎಂದರು.
ಸರಕಾರದಿಂದ ಅಧಿಕೃತವಾಗಿ ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ಪೈಪ್ ಲೈನ್ ಕಾಮಗಾರಿಗೆ ವಿರೋಧದ ಜೊತೆಗೂ ಕಾನೂನು ಹೋರಾಟ ನಡೆಸುವ ಮೂಲಕ ಸರಕಾರಕ್ಕೆ ತಕ್ಕ ಹೋರಾಟ ನಡೆಸಲಾಗುವುದು ಎಂದರು.
ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ ಮಾತನಾಡಿ, ಬೆಳಗಾವಿ ಜನರ ಜೀವನಾಡಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿಗೆ ನಮ್ಮ ವಿರೋಧ ಇದೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲಿರುವ ಕೈಗಾರಿಕಾ ಕಂಪನಿಗಳಿದ್ದಾವೆ. ಇಲ್ಲಿಯೇ ನೀರಿನ ಅಭಾವ ಇದೆ. ಅದರ ಹೊರತಾಗಿಯೂ ಧಾರವಾಡ ಕೈಗಾರಿಕಾ ಪ್ರದೇಶದಕ್ಕೆ ಪೈಪ್ ಲೈನ್ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು.
ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಸ್ಥಿಕೆ ವಹಿಸಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಳಿಸಲು ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದರು.
ಕರವೇ ಉಪಾಧ್ಯಕ್ಷ ಗಣೇಶ ರೋಕಡೆ ಮಾತನಾಡಿ, ಹಿಡಕಲ್ ಜಲಾಶಯದಿಂದ ಧಾರವಾಡ ಕೈ ನೀರು ಕೊಂಡೊಯುತ್ತಿದ್ದರೂ ಇಲ್ಲಿನ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಇದೆ ಎಂದರು.
