
ಬೆಳಗಾವಿ
ಮಹಿಳೆಯರ ಆಡಳಿತದಲ್ಲಿ ಅವರ ಪತಿ ಹಸ್ತಕ್ಷೇಪ ಮಾಡಬಾರದು ಎಂಬ ಕಾನೂನಿದೆ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಪಂನಲ್ಲಿ ಪರಿಸ್ಥಿತಿಯೇ ವಿಭಿನ್ನವಾಗಿದೆ. ಪತ್ನಿ ಸಾಂವಿಧಾನಿಕವಾಗಿ ಗ್ರಾಪಂ ಅಧ್ಯಕ್ಷೆಯಾಗಿದ್ದರೂ ಸಹ ಅವರ ಹೆಸರಿನಲ್ಲಿ ಪತಿಯ ದರ್ಪ ಮತ್ತು ದರ್ಬಾರ್ ಹೆಚ್ಚಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಾಗಲೇ ಹಲವು ಬಾರಿ ದೂರುಗಳು ಕೇಳಿ ಬಂದಿದ್ದರೂ ಮೇಲಧಿಕಾರಿಗಳು ಆರೋಪ ಅಲ್ಲಗಳೆದಿದ್ದರು. ಮಹಿಳಾ ಮೀಸಲಾತಿಯಡಿಯಲ್ಲಿ ಮೀನಾಕ್ಷಿ ದಳವಾಯಿ ಗ್ರಾಪಂ ಅಧ್ಯಕ್ಷರಾಗಿದ್ದು. ಆದರೆ, ಪತ್ನಿ ಹೆಸರಿನಲ್ಲಿ ಅವರ ಪತಿ ಮಲ್ಲಿಕಾರ್ಜುನ ಅಧಿಕಾರ ನಡೆಸುತ್ತಿದ್ದು, ನಾಮಕೇವಾಸ್ತೆಗೆ ಮಾತ್ರ ಮಿನಾಕ್ಷಿಯವರು ಅಧ್ಯಕ್ಷರಾಗಿದ್ದಾರೆ. ಪತ್ನಿಯು ಸಾಂವಿಧಾನಿಕ ಮಾನ್ಯತೆಗೆ ಒಳಪಟ್ಟು ಗ್ರಾಪಂ ಪ್ರಥಮ ಪ್ರಜೆಯಾಗಿದ್ದಾರೆ. ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದಿರದೆ ಕಾನೂನು ಬಾಹಿರವಾಗಿ ಅಧ್ಯಕ್ಷರ ಪತಿಯೇ ಅಧಿಕಾರ ನಡೆಸುತ್ತಿರುವುದು ಮಹಿಳೆಯರ ಮೀಸಲಾತಿ ಹಕ್ಕಿಗೆ ಧಕ್ಕೆ ತಂದಂತಾಗಿದೆ.
ಪಂಚಾಯಿತಿ ಸಾಮಾನ್ಯ ಸಭೆ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿಯೂ ಸಹ ಪತ್ನಿ ಪರವಾಗಿ ಪತಿಯೇ ಅಭಿಪ್ರಾಯ ಹಂಚಿಕೊಂಡು,ಏಕಪಕ್ಷೀಯ ನಿರ್ಧಾರವನ್ನೂ ಕೈಗೊಳ್ಳುತ್ತಿರುವುದು ಪಂಚಾಯತ್ ರಾಜ್ ವ್ಯವಸ್ಥೆಯ ದುರ್ಬಲಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪೂರಕವಾಗುವಂತೆ ಪಂಚಾಯತಿ ಕಚೇರಿಯಲ್ಲಿ ಎಲ್ಲಾ ಕಡೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು ಅಧ್ಯಕ್ಷರ ಕೊಠಡಿಗೆ ಕ್ಯಾಮೆರಾ ಅಳವಡಿಸದೆ ಪತಿ ತನ್ನ ಕಾರುಬಾರು ಹಾಗೂ ಅಕ್ರಮಗಳಿಗೆ ಅವಕಾಶ ಮಾಡಿಕೊಂಡಿದ್ದು,ಹಾಗೆಯೇ
ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಗಳಲ್ಲೂ ಸಾರ್ವಜನಿಕರಿಂದ ಹಣ ವಸೂಲಿಯ ಆರೋಪವೂ ಕೇಳಿ ಬಂದಿದೆ. ಪತ್ನಿಯ ಅಧಿಕಾರದಲ್ಲಿ ಪತಿಯೇ ಕಲೆಕ್ಷನ್ ಮಾಸ್ಟರ್ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಗ್ರಾಮದ ಯೂಥ್ ಫೌಂಡೇಶನ್ ಅಧ್ಯಕ್ಷ ಗಣಪತಿ ಅವಳೇಕರ ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನು ಏನು ಹೇಳುತ್ತದೆ..?
ಪಂಚಾಯಿತಿಯ ಆಡಳಿತ, ಸರಕಾರ ಸಭೆ-ಸಮಾರಂಭ, ಯಾವುದೇ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಾಗ, ಕರಾರು ಸಂಬಂಧದ ಅಥವಾ ಕಾಮಗಾರಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಕುಟುಂಬದ ಹತ್ತಿರದ ಸಂಬಂಧಿಯಾಗಿರುವ ಯಾವೊಬ್ಬ ವ್ಯಕ್ತಿಯೊಂದಿಗೆ ಪ್ರತ್ಯಕ್ಷವಾಗಿ ತೊಡಗಿರುವುದು ಕಂಡುಬಂದರೆ ಅಥವಾ ಪಾಲುದಾರನಂತೆ, ನೌಕರನಂತೆ ಅಥವಾ ಅನ್ಯ ಸಂಘ-ಸಂಸ್ಥೆ, ಮಂಡಳಿಯಲ್ಲಿ ಸದಸ್ಯನಂತೆ ಸಹಭಾಗಿಯಾಗಿರುವುದು ಖಚಿತಪಟ್ಟರೆ ಆ ಸದಸ್ಯರನ್ನು ಸದಸ್ಯತ್ವದಿಂದ ತೆಗೆದುಹಾಕಬಹುದು ಎಂದು ಕರ್ನಾಟಕ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಅಧಿನಿಯಮದಲ್ಲಿದೆ. ಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ಕ್ರಮವನ್ನು ಕೈಗೊಳ್ಳುವ ಅಧಿಕಾರವೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗಿದೆ.
