
ಬೆಳಗಾವಿ
ನಗರದಲ್ಲಿ ಪ್ರೀತಿ ನೆಪದಲ್ಲಿ ಯುವತಿಗೆ ಮೋಸ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಶಹಾಪುರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಈಶ್ವರಸಿಂಗ್ ಬಡಗೂಜರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಫೇಸ್ಬುಕ್ ಮೂಲಕ ಯುವತಿಗೆ ಪರಿಚಯವಾಗಿ, ಬಳಿಕ ಮದುವೆಯಾಗುವುದಾಗಿ ನಂಬಿಸಿ ಅವಳೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದ. ಈ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಸಂತ್ರಸ್ತ ಯುವತಿ ಉಲ್ಲೇಖಿಸಿದ್ದಾಳೆ.

ಇದಲ್ಲದೆ, ಆರೋಪಿ ಯುವತಿಯಿಂದ ಸುಮಾರು 150 ಗ್ರಾಂ ಚಿನ್ನ ಹಾಗೂ 19 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವುದಾಗಿ ತಿಳಿದುಬಂದಿದೆ. ನಂತರ ಮದುವೆಗಾಗಿ ಮತ್ತೆ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆಯಿಂದ ನೊಂದ ಯುವತಿ ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ದೂರು ನೀಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
