Monday, November 23, 2026
HomeBelagaviಬೆಳಗುಂದಿ ಸರ್ವೆ ನಂ.285ನಲ್ಲಿ ಎಗ್ಗಿಲದೆ ನಡೆದಿದೆ ಮೈನಿಂಗ್

ಬೆಳಗುಂದಿ ಸರ್ವೆ ನಂ.285ನಲ್ಲಿ ಎಗ್ಗಿಲದೆ ನಡೆದಿದೆ ಮೈನಿಂಗ್

ಬೆಳಗಾವಿ ತಾಲೂಕಿನ ಬೆಳ್ಳಗುಂದಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಚಟುವಟಿಕೆ ಸಂಬಂಧ ಗಂಭೀರ ಆರೋಪಗಳು ಎದುರಾಗಿವೆ.
ವಿಶೇಷವಾಗಿ ಸರ್ವೇ ನಂ. 285 ಅನ್ನು ಸಂಬಂಧಿತ ಇಲಾಖೆಗಳ ಸ್ಪಷ್ಟ ಅನುಮತಿ ಇಲ್ಲದೇ ಗಣಿಗಾರಿಕೆ ಲೈಸೆನ್ಸ್‌ಗೆ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಲಭ್ಯ ದಾಖಲೆಗಳ ಪ್ರಕಾರ, ಸರ್ವೇ ನಂ. 285 ಅರಣ್ಯ ಇಲಾಖೆ NOC, ತಹಶೀಲ್ದಾರ್–ಜಿಲ್ಲಾಧಿಕಾರಿ ಪತ್ರ ವ್ಯವಹಾರ, ರೈತರ ಲೀಸ್ ಒಪ್ಪಂದ ಹಾಗೂ ಪ್ರಾಥಮಿಕ ಅನುಮತಿ ದಾಖಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದಾಗ್ಯೂ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಲೈಸೆನ್ಸ್‌ನಲ್ಲಿ ಈ ಸರ್ವೇ ನಂ. ಸೇರಿರುವುದು ಅನುಮಾನಕ್ಕೆ ಕಾರಣವಾಗಿದೆ.
RTC ದಾಖಲೆಗಳ ಪ್ರಕಾರ, ಸರ್ವೇ ನಂ. 285 ಸುಮಾರು 15.40 ಏಕರೆ ವಿಸ್ತೀರ್ಣದ ಸರ್ಕಾರಿ ಖರಾಬು ಜಮೀನಾಗಿದ್ದು, ಇಂತಹ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಪ್ರತ್ಯೇಕ ಅನುಮತಿ ಅಗತ್ಯವಿದೆ. ಆದರೆ ಈ ಕುರಿತು ಸಂಬಂಧಿತ ದಾಖಲೆಗಳು ಲಭ್ಯವಾಗಿಲ್ಲವೆಂದು ತಿಳಿದುಬಂದಿದೆ.
ಇನ್ನೊಂದೆಡೆ, ಕಿಣಾಯೆ ಗ್ರಾಮದ ಸರ್ವೇ ನಂ. 183 ಮತ್ತು 184 ಪ್ರದೇಶಗಳಿಂದ ಅಕ್ರಮವಾಗಿ ಖನಿಜವನ್ನು ತೆಗೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನಂತರ ಆ ಖನಿಜವನ್ನು ಬೆಳ್ಳಗುಂದಿಗೆ ಸಾಗಿಸಿ ಪರವಾನಗಿ ಮೂಲಕ ಮರು ಸಾಗಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಆರೋಪಗಳು ಸತ್ಯವಾದರೆ ಅಕ್ರಮ ಗಣಿಗಾರಿಕೆ, ಪರವಾನಗಿ ದುರುಪಯೋಗ ಹಾಗೂ ಸರ್ಕಾರಕ್ಕೆ ರಾಯಲ್ಟಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.
ಗಣಿಗಾರಿಕೆ ಲೀಸ್ 2003ರಲ್ಲಿ ಮಂಜೂರಾಗಿದ್ದು, 2015ರ ತಿದ್ದುಪಡಿ ಬಳಿಕ 50 ವರ್ಷಗಳಿಗೆ ವಿಸ್ತರಿಸಲಾಗಿದೆ. ಆದರೆ ಪರಿಸರ ಅನುಮತಿ 2003ರಲ್ಲಿ ನೀಡಲ್ಪಟ್ಟಿದ್ದು, 2023 ನಂತರ ಅದರ ಮಾನ್ಯತೆ ಪ್ರಶ್ನಾರ್ಥಕವಾಗಿದೆ. ಪರಿಸರ ಅನುಮತಿ ನವೀಕರಣವಿಲ್ಲದೇ ಗಣಿಗಾರಿಕೆ ನಡೆಸಿದರೆ ಅದು ಕಾನೂನುಬಾಹಿರವಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸರ್ವೇ ನಂ. 285 ಲೈಸೆನ್ಸ್‌ಗೆ ಸೇರಿಕೆಯ ಪ್ರಕ್ರಿಯೆ, ಸರ್ಕಾರಿ ಜಮೀನಿಗೆ ಅನುಮತಿ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಮಂಜೂರಾತಿ ಸೇರಿದಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಈ ಪ್ರಕರಣದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತವು ಸಮಗ್ರ ತನಿಖೆ ನಡೆಸಿ ಸ್ಪಷ್ಟತೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Total Views 116
RELATED ARTICLES

Most Popular

Recent Comments

KNN City News
Home
E-Paper