
ಬೆಳಗಾವಿ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಜಾ ಸೌಧ ಜಿಲ್ಲಾ ಅದಾಲತ್ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆಗಳು ವೇಗ ಪಡೆಯುತ್ತಿವೆ. ಪ್ರಸ್ತುತ ಡಿಸಿ ಕಚೇರಿಯ ಹಿಂಭಾಗದ ಪಾರ್ಕಿಂಗ್ ಪ್ರದೇಶದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಳ್ಳಲಿದ್ದು, ಇದರಿಂದ ಬೆಳಗಾವಿಯ ಆಡಳಿತಾತ್ಮಕ ಮೂಲಸೌಕರ್ಯದಲ್ಲಿ ಮಹತ್ವದ ಸುಧಾರಣೆ ನಿರೀಕ್ಷಿಸಲಾಗಿದೆ.
ಈ ಕಟ್ಟಡವು ಆಧುನಿಕ ಸೌಲಭ್ಯಗಳೊಂದಿಗೆ ಸಂಪ್ರದಾಯಬದ್ಧ ವಾಸ್ತುಶೈಲಿಯನ್ನು ಒಳಗೊಂಡಿರಲಿದ್ದು, ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಸಮಗ್ರ ಕೇಂದ್ರವಾಗಲಿದೆ. ಯೋಜನೆಯ ವಾಸ್ತು ವಿನ್ಯಾಸವನ್ನು ಕರ್ಣಾಟಕ ಸಾರ್ವಜನಿಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮುಖ್ಯ ವಾಸ್ತುಶಿಲ್ಪಿಗಳು ಸಿದ್ಧಪಡಿಸಿದ್ದು, ಸವಿಸ್ತಾರ ಯೋಜನಾ ವರದಿ ಯನ್ನು ಜಲವಾಹಿನಿ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸಿದೆ.
ಪಾರಂಪರಿಕ ಶೈಲಿಯ ಅಂಶಗಳಾದ ಅಲಂಕಾರಿಕ ಸ್ತಂಭಗಳು, ಗುಮ್ಮಟಗಳು ಹಾಗೂ ಅಲಂಕಾರಿಕ ಕಟ್ಟಡ ವಿನ್ಯಾಸ ಈ ಯೋಜನೆಯ ವಿಶೇಷತೆಯಾಗಿದ್ದು, ಇದು ಕರ್ನಾಟಕದ ಸಾಂಪ್ರದಾಯಿಕ ಸೌಂದರ್ಯವನ್ನು ಪ್ರತಿಬಿಂಬಿಸುವುದರ ಜೊತೆಗೆ ಆಡಳಿತಾತ್ಮಕ ಭವ್ಯತೆಯನ್ನು ಕೂಡ ತೋರಿಸಲಿದೆ.
ಪ್ರಸ್ತಾವಿತ ಕಟ್ಟಡವು ಬೇಸ್ಮೆಂಟ್, ಸ್ಟಿಲ್ಟ್, ಗ್ರೌಂಡ್, 3 ಮಹಡಿಗಳ ವಿನ್ಯಾಸ ಹೊಂದಿರಲಿದೆ. ಆರ್ಸಿಸಿ ಫ್ರೇಮ್ ವ್ಯವಸ್ಥೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡದ ಬೇಸ್ಮೆಂಟ್ ಎತ್ತರ 3.60 ಮೀಟರ್ ಆಗಿದ್ದು, ಇತರೆ ಮಹಡಿಗಳು ತಲಾ 4.0 ಮೀಟರ್ ಎತ್ತರ ಹೊಂದಿರುತ್ತವೆ. ಭೂಮಿಯ ಮೇಲಿನ ಕಟ್ಟಡದ ಎತ್ತರ 21.05 ಮೀಟರ್ ಆಗಿದ್ದು, ಕೇಂದ್ರ ಗುಮ್ಮಟದ ಎತ್ತರ 10.50 ಮೀಟರ್ ಆಗಿರಲಿದೆ. ಒಟ್ಟಾರೆ ಕಟ್ಟಡದ ಎತ್ತರ 31.55 ಮೀಟರ್ ಆಗಲಿದೆ.
ನಗರದ ಮುಖ್ಯ ರಸ್ತೆಯತ್ತ ಉತ್ತರ ದಿಕ್ಕಿನಲ್ಲಿ ಮುಖಮಾಡಿ ನಿರ್ಮಾಣವಾಗಲಿರುವ ಈ ಪ್ರಜಾ ಸೌಧ ಸಾರ್ವಜನಿಕರಿಗೆ ಸುಲಭ ಪ್ರವೇಶವನ್ನು ಒದಗಿಸುವುದರ ಜೊತೆಗೆ, ಜಿಲ್ಲಾಮಟ್ಟದ ಆಡಳಿತ ಸೇವೆಗಳನ್ನು ಒಂದೇ ಕಡೆ ಒದಗಿಸುವ ಕೇಂದ್ರವಾಗಲಿದೆ. ಈ ಯೋಜನೆ ಪೂರ್ಣಗೊಂಡ ನಂತರ ಬೆಳಗಾವಿಯಲ್ಲಿ ಆಡಳಿತಾತ್ಮಕ ಕಾರ್ಯಗಳ ಸುಗಮತೆ ಹಾಗೂ ಸಾರ್ವಜನಿಕ ಸೇವೆಗಳ ದಕ್ಷತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.
