
ಬೆಳಗಾವಿ
ಶಿವಂ ಅಸೋಸಿಯೇಟ್ಸ್ ವತಿಯಿಂದ ಮೇ 17ರಂದು “ಸ್ವಚ್ಚ ಬೆಳಗಾವಿ ಸಂಭ್ರಮ” ಹೆಸರಿನಲ್ಲಿ 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದ ಹಿನ್ನೆಲೆ ಜಿಲ್ಲಾಡಳಿತ ಈಗಾಗಲೇ ಅನುಮತಿ ನಿರಾಕರಿಸಿ ಶಾಕ್ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಬೆಳಗಾವಿ ಮಹಾನಗರ ಪಾಲಿಕೆ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪಾಲಿಕೆಯ ಅನುಮತಿ ಪಡೆಯದೇ ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ.
ಶಿವಂ ಅಸೋಸಿಯೇಟ್ಸ್ ವತಿಯಿಂದ ಬೆಳಗಾವಿ ನಗರದ ವಿವಿಧ ಪ್ರಮುಖ ವೃತ್ತಗಳು, ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮದ ಪ್ರಚಾರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆಯ ಪೂರ್ವಾನುಮತಿ ಪಡೆಯದೇ ಬ್ಯಾನರ್ ಅಳವಡಿಸಿರುವುದು ನಿಯಮ ಉಲ್ಲಂಘನೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ಕಾರ್ಯಕ್ರಮವನ್ನು ಪಾಲಿಕೆಯ ವ್ಯಾಪ್ತಿಗೆ ಸೇರದ ಸರದಾರ್ಸ್ ಮೈದಾನದಲ್ಲಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಸಾವಿರಾರು ಜನರನ್ನು ಸೇರಿಸಿ ನಗರ ಸ್ವಚ್ಚತಾ ಅಭಿಯಾನ ನಡೆಸುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅಗತ್ಯ ಆಡಳಿತಾತ್ಮಕ ಅನುಮತಿ ಹಾಗೂ ಭದ್ರತಾ ನಿಯಮಗಳನ್ನು ಪಾಲಿಸದೇ ಮುಂದಾಗಿರುವುದಕ್ಕೆ ಜಿಲ್ಲಾಡಳಿತ ಈಗಾಗಲೇ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತ್ತು.
ಇದಾದ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಅಕ್ರಮವಾಗಿ ಅಳವಡಿಸಲಾದ ಬ್ಯಾನರ್‌ಗಳನ್ನು ತೆರವುಗೊಳಿಸಿ ಬಿಸಿ ಮುಟ್ಟಿಸಿದ್ದಾರೆ. ನಗರದ ಸೌಂದರ್ಯ ಹಾಳು ಮಾಡುವ ರೀತಿಯಲ್ಲಿ ಹಾಗೂ ಅನುಮತಿ ಇಲ್ಲದೇ ಯಾವುದೇ ಜಾಹೀರಾತು ಫಲಕ ಅಥವಾ ಬ್ಯಾನರ್ ಅಳವಡಿಸಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಕೆ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ಕಾರ್ಯಾಚರಣೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ.ತಿಳಿಸಿದರು.
