
ಬೆಳಗಾವಿ
ಆನ್ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 19.50 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಭೂಷಣ ಪಾಟೀಲ ವಂಚನೆಗೆ ಒಳಗಾದವರು. ಇವರು ಬಳಸುತ್ತಿದ್ದ ಮೊಬೈಲ್ ನಂಬರ್ ಅಪರಿಚಿತರು ವಾಟ್ಸ್ಆ್ಯಪ್ನಲ್ಲಿದ್ದ ಒಂದು ಹೂಡಿಕೆ ಸಂಬಂಧಿತ ಗ್ರೂಪ್ಗೆ ಸೇರಿಸಿದ್ದರು. ಬಳಿಕ ಆ ಗ್ರೂಪ್ನಲ್ಲಿ ಷೇರು ಮಾರುಕಟ್ಟೆ, ಟ್ರೇಡಿಂಗ್ ಹಾಗೂ ಐಪಿಒಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ಹೆಚ್ಚಿನ ಲಾಭ ಗಳಿಸಬಹುದು ಎಂದು ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ ಆಮಿಷ ಒಡ್ಡಲಾಗಿದೆ.
ಗ್ರೂಪ್ನಲ್ಲಿದ್ದ ಕೆಲವರು ತಾವು ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆದಿದ್ದೇವೆ ಎಂದು ನಕಲಿ ಸ್ಕ್ರೀನ್ಶಾಟ್ಗಳು ಹಾಗೂ ಸಂದೇಶಗಳನ್ನು ಹಂಚಿಕೊಂಡು ಭೂಷಣ ಪಾಟೀಲ ಅವರಿಗೆ ನಂಬಿಕೆ ಮೂಡಿಸಿದ್ದಾರೆ. ಇದರಿಂದ ಪ್ರಭಾವಿತರಾದ ಅವರು 2025ರ ಅಕ್ಟೋಬರ್ ತಿಂಗಳಲ್ಲಿ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 19.50 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಹಣ ವರ್ಗಾವಣೆ ಮಾಡಿದ ಬಳಿಕ ಆರಂಭದಲ್ಲಿ ಕೆಲ ದಿನಗಳ ಕಾಲ ಲಾಭದ ಭರವಸೆ ನೀಡಿದ ಆರೋಪಿಗಳು, ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾರೆ. ಹೂಡಿಕೆ ಮಾಡಿದ ಮೂಲ ಹಣವನ್ನಾಗಲಿ, ಲಾಭದ ಮೊತ್ತವನ್ನಾಗಲಿ ಹಿಂದಿರುಗಿಸದೇ ವಂಚಿಸಿರುವುದು ತಿಳಿದ ಬಳಿಕ ಭೂಷಣ ಪಾಟೀಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ಖಾತೆಗಳ ಮಾಹಿತಿ, ಮೊಬೈಲ್ ಸಂಖ್ಯೆಗಳು ಹಾಗೂ ವಾಟ್ಸ್ಆ್ಯಪ್ ಗ್ರೂಪ್ನ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸೈಬರ್ ವಂಚಕರ ಜಾಲ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
