Monday, November 23, 2026
HomeBelagaviಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ: ಮಹಾಂತ ಸ್ವಾಮೀಜಿಗಳ ಬೇಸರ

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ: ಮಹಾಂತ ಸ್ವಾಮೀಜಿಗಳ ಬೇಸರ

 

ಬೆಳಗಾವಿ
ಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೈಲಹೊಂಗಲದ ಮಹಾಂತ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಜರಾಯಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಹಾಂತ ಸ್ವಾಮೀಜಿ, ಹೊಸ ಸರ್ಕಾರ ರಚನೆಯಾದಾಗ ರಾಜ್ಯದ ಜನರಲ್ಲಿ ಹೊಸ ನಿರೀಕ್ಷೆ ಮೂಡಿತ್ತು. ಒಂದು ಕಡೆ ಸಂತೋಷದ ವಾತಾವರಣ ಇದ್ದರೆ, ಮತ್ತೊಂದು ಕಡೆ ರಾಮಲಿಂಗ ರೆಡ್ಡಿಯವರ ರಾಜೀನಾಮೆ ಸುದ್ದಿ ಕೇಳಿ ದುಃಖವಾಗಿದೆ ಎಂದು ಹೇಳಿದರು.
ರಾಮಲಿಂಗ ರೆಡ್ಡಿಯವರು ಮುಜರಾಯಿ ಇಲಾಖೆ ಹಾಗೂ ಸಾರಿಗೆ ಸಚಿವರಾಗಿ ರಾಜ್ಯದ ಜನರಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಯಾವ ಸ್ಥಾನದಲ್ಲಿದ್ದರೂ ಸರಳತೆ, ನಿಷ್ಠೆ ಮತ್ತು ಉನ್ನತ ವ್ಯಕ್ತಿತ್ವವನ್ನು ಉಳಿಸಿಕೊಂಡು ಬಂದವರು ಎಂದು ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
“ಮೊನ್ನೆಯಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ಇಂದು ರಾಜೀನಾಮೆ ನೀಡಿರುವುದು ಅಚ್ಚರಿ ಹಾಗೂ ನೋವು ತಂದಿದೆ. ರಾಜಕೀಯ ಜೀವನದಲ್ಲಿ ತಮ್ಮ ಹೆಸರಿಗೆ ಯಾವುದೇ ಕಪ್ಪು ಚುಕ್ಕೆ ಬರದಂತೆ ನಡೆದುಕೊಂಡಿರುವ ನಾಯಕರಲ್ಲಿ ರಾಮಲಿಂಗ ರೆಡ್ಡಿಯವರು ಪ್ರಮುಖರು” ಎಂದು ಹೇಳಿದರು.
ರಾಜಕೀಯದಲ್ಲಿ ನಿಷ್ಠೆಯಿಂದ ಕೆಲಸ ಮಾಡುವ ನಾಯಕರಿಗೆ ಸರ್ಕಾರ ಗೌರವ ನೀಡಬೇಕು. ರಾಮಲಿಂಗ ರೆಡ್ಡಿಯವರಂತಹ ಅನುಭವಿಗಳ ಸೇವೆ ಸರ್ಕಾರಕ್ಕೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಕೂಡಲೇ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
“ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಾಗಿರಬಹುದು. ಸರ್ಕಾರ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಪಕ್ಷ ಮತ್ತು ಸರ್ಕಾರ ಅವರ ಕಡೆ ವಿಶೇಷ ಗಮನ ಹರಿಸಬೇಕು” ಎಂದು ಹೇಳಿದರು.
ರಾಮಲಿಂಗ ರೆಡ್ಡಿಯವರ ಪರವಾಗಿ ಧಾರ್ಮಿಕ ಮುಖಂಡರು ಹಾಗೂ ವಿವಿಧ ಸ್ವಾಮೀಜಿಗಳು ನಿಲ್ಲಲಿದ್ದು, ಅವರಿಗೆ ನ್ಯಾಯಸಮ್ಮತ ಸ್ಥಾನಮಾನ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಮಹಾಂತ ಸ್ವಾಮೀಜಿ ತಿಳಿಸಿದರು.
ರಾಜೀನಾಮೆ ವಿಚಾರದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ಸೆಳೆದಿದೆ.

Total Views 269
RELATED ARTICLES

Most Popular

Recent Comments

KNN City News
Home
E-Paper